Saturday, 12 December 2020

ಕರ್ನಾಟಕದಲ್ಲಿ ಈ ಬಾರಿ ಚಳಿಯ ಪ್ರಮಾಣ ಎಷ್ಟಿರುತ್ತೆ ಗೊತ್ತಾ?


 ಕರ್ನಾಟಕದಲ್ಲಿ ಈ ಬಾರಿ ಚಳಿಯ ಪ್ರಮಾಣ ಎಷ್ಟಿರುತ್ತೆ ಗೊತ್ತಾ?

ಬೆಂಗಳೂರು,ಡಿ.12-ಹಿಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಚಳಿಯ ತೀವ್ರತೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವುದಲ್ಲದೆ ಮುಂಜಾನೆ ಮಂಜು ಕವಿಯುತ್ತಿದೆ. ಇದರಿಂದ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಇನ್ನು ಒಂದು ತಿಂಗಳು ತೀವ್ರವಾದ ಚಳಿ ರಾಜ್ಯದಲ್ಲಿ ಕಂಡುಬರಲಿದೆ. ಚಳಿಯ ಜೊತೆಗೆ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

ಈ ಬಾರಿ ಮಳೆಯ ಪ್ರಮಾಣ ವಾಡಿಕೆಗಿಂತ ಹೆಚ್ಚಾಗಿರುವುದಲ್ಲದೆ ಡಿಸೆಂಬರ್ ಮೊದಲ ವಾರದವರೆಗೂ ಮಳೆಯಾಗಿದೆ. ಇದರ ಪರಿಣಾಮ ನವೆಂಬರ್ ತಿಂಗಳಿನಲ್ಲಿ ಚಳಿ ಪ್ರಮಾಣ ನಿರೀಕ್ಷೆಗಿಂತಲೂ ಕಡಿಮೆ ಇತ್ತು. ಈಗಾಗಲೇ ರಾಜ್ಯದ ಬಹುತೇಕ ಕಡೆಗಳಲ್ಲಿ ಮೈ ಕೊರೆಯುವ ಚಳಿ ಕಂಡುಬರುತ್ತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಚಳಿಯಿದೆ.

ಡಿಸೆಂಬರ್ ತಿಂಗಳಿನಲ್ಲಿ ಮಂಜು ಕವಿಯುವುದು ಸಾಮಾನ್ಯ ಪ್ರಕ್ರಿಯೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು. ಸಂಕ್ರಾಂತಿವರೆಗೂ ರಾಜ್ಯದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿ ಕಂಡುಬರಲಿದೆ. ಬೆಳಗಿನ ವೇಳೆ ಕೆಲವೆಡೆ ಮಂಜು ಕವಿಯುತ್ತಿದೆ. ಇನ್ನು ಕೆಲವೆಡೆ ದಟ್ಟವಾದ ಮಂಜು ಕವಿಯಬಹುದು.

ಇದರಿಂದ ಆರೋಗ್ಯದ ಮೇಲೂ ಪರಿಣಾಮ ಉಂಟಾಗಲಿದ್ದು, ಗಂಟಲು, ಶ್ವಾಸಕೋಶ ಸಂಬಂಧಿ ರೋಗಗಳು ಕಾಣಿಸಿಕೊಳ್ಳಬಹುದು. ಅಸ್ತಮ ರೋಗಿಗಳಿಗೂ ತೊಂದರೆಯಗುತ್ತದೆ. ವಾತಾವರಣದಲ್ಲಿ ಮಾಲಿನ್ಯ ಹೆಚ್ಚಾಗಿರುವುದು ಆರೋಗ್ಯದ ಮೇಲೆ ಪರಿಣಾಮ ಬೀರಲು ಮತ್ತೊಂದು ಕಾರಣವಾಗಿದೆ ಎಂದು ಹೇಳಿದರು. ಈ ಬಾರಿ ಹಿಂಗಾರು ಮತ್ತು ಮುಂಗಾರು ಮಳೆ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಕೆಲವೆಡೆ ವಾಡಿಕೆಗಿಂತಲೂ ಹೆಚ್ಚಾಗಿದೆ. ರಾಜ್ಯದಲ್ಲಿ ಸರಾಸರಿ ಕನಿಷ್ಠ ತಾಪಮಾನ 16.5 ಡಿಗ್ರಿ ಸೆಲ್ಸಿಯಸ್‍ನಿಂದ 25 ಡಿಗ್ರಿ ಸೆಲ್ಸಿಯಸ್‍ವರೆಗೂ ಇಂದು ಕಂಡುಬಂದಿದೆ.

ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರುನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 16-17 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಅಲ್ಲದೆ ಗಾಳಿಯಲ್ಲಿನ ಆದ್ರತೆ ಪ್ರಮಾಣ ಶೇ.80ರಿಂದ 90ರಷ್ಟಿದೆ. ಇದರಿಂದಾಗಿ ಬೆಳಗಿನ ವೇಳೆ ಮಂಜು ಕವಿದ ವಾತಾವರಣ ಕಂಡುಬಂದಿದೆ ಎಂದು ವಿವರಿಸಿದರು.

ಗರಿಷ್ಠ ತಾಪಮಾನ ಸರಾಸರಿ 25-28 ಡಿಗ್ರಿ ಸೆಲ್ಸಿಯಸ್‍ವರೆಗೂ ಕಂಡುಬರುತ್ತಿದೆ. ಹಗಲಿನ ವೇಳೆ ಬಿಸಿಲಿನ ತಾಪ ಹೆಚ್ಚಾಗಿದ್ದರೆ, ಸಂಜೆ, ರಾತ್ರಿಯಲ್ಲಿ ತಾಪಮಾನ ಕಡಿಮೆಯಾಗಿ ಚಳಿ ಹೆಚ್ಚಾಗಿರುತ್ತದೆ ಎಂದು ಹೇಳಿದರು.


SHARE THIS

Author:

0 التعليقات: