Thursday, 10 December 2020

ನೂತನ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ


 ನೂತನ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ(ಡಿಸೆಂಬರ್ 10) ನೂತನ ಸಂಸತ್ ಭವನಕ್ಕೆ ಶಿಲಾನ್ಯಾಸ ಪೂಜೆ ನೆರವೇರಿಸಿದರು. ಹಲವು ರಾಜಕೀಯ ಪಕ್ಷಗಳ ನಾಯಕರು, ಸಂಪುಟ ಸಚಿವರು, ವಿವಿಧ ದೇಶಗಳ ರಾಯಭಾರಿಗಳು, ಧಾರ್ಮಿಕ ಮುಖಂಡರು ತುಂಬಿದ್ದ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನೂತನ ಸಂಸತ್ತು ಭವನಕ್ಕೆ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆಯನ್ನು ನೆರವೇರಿಸಿದರು.

ದೆಹಲಿಯ ಸಂಸತ್ತು ಭವನ ಆವರಣದಲ್ಲಿಯೇ ನೂತನ ಸಂಸತ್ತು ಭವನ ತಲೆಯೆತ್ತಲಿದ್ದು, 2022ರ ವೇಳೆಗೆ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಕರ್ನಾಟಕದ ಶೃಂಗೇರಿ ಮಠದ ಅರ್ಚಕರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿತು. ನಂತರ ಅಂತರ ಧರ್ಮ ಪ್ರಾರ್ಥನೆಯ ಧ್ಯೋತಕವಾಗಿ ಸರ್ವಧರ್ಮ ಪ್ರಾರ್ಥನೆ ನೆರವೇರಿತು.

ಲೋಕಸಭಾಧ್ಯಕ್ಷ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ, ರಾಜ್ಯಸಭೆ ಉಪಾಧ್ಯಕ್ಷ ಪರಿವಂಶ್ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ಉಪಸ್ಥಿತರಿದ್ದರು.

ನೂತನ ಭವನದ ವಿಶೇಷತೆಯೇನು?:ಹೊಸ ಸಂಸತ್ತು ಭವನದಲ್ಲಿ ಎಲ್ಲಾ ಸಂಸದರಿಗೆ ಪ್ರತ್ಯೇಕ ಕಚೇರಿಗಳು, ಅವರಿಗೆ ಲಭ್ಯವಾಗುವಂತೆ ಇತ್ತೀಚಿನ ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳನ್ನು ಕಚೇರಿಗಳಲ್ಲಿ ಅಳವಡಿಸಲಾಗುತ್ತದೆ, ಈ ಮೂಲಕ ಕಾಗದರಹಿತ ಕಚೇರಿಯನ್ನಾಗಿ ಮಾಡುವ ಯೋಜನೆ ಕೇಂದ್ರ ಸರ್ಕಾರದ್ದು.

ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಸಾರುವ ಭವ್ಯವಾದ ಸಂವಿಧಾನ ಸಭಾಂಗಣ, ಸಂಸದರಿಗೆ ಲಾಂಜ್, ಲೈಬ್ರೆರಿ, ಮಲ್ಟಿಪಲ್ ಕಮಿಟಿ ರೂಂ,ಡೈನಿಂಗ್ ಪ್ರದೇಶಗಳು ಮತ್ತು ಪಾರ್ಕಿಂಗ್ ಜಾಗಗಳಿರುತ್ತವೆ. ಕಳೆದ ಸೆಪ್ಟೆಂಬರ್ ನಲ್ಲಿ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಹೊಸ ಸಂಸತ್ತು ಭವನವನ್ನು ನಿರ್ಮಿಸುವ ಬಿಡ್ಡಿಂಗ್ ಪ್ರಕ್ರಿಯೆಯನ್ನು ಗೆದ್ದುಕೊಂಡಿದ್ದು, 861.90 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಡಲಿದೆ. ಭವನದ ಒಟ್ಟು ವಿಸ್ತೀರ್ಣ 64,500 ಚದರ ಮೀಟರ್.

ಲೋಕಸಭೆಯಲ್ಲಿ 888 ಮಂದಿ ಸದಸ್ಯರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರಲಿದ್ದು, ರಾಜ್ಯಸಭೆಯಲ್ಲಿ 384 ಸದಸ್ಯರು ಕುಳಿತುಕೊಳ್ಳಬಹುದಾಗಿದೆ.

ಈಗಿರುವ ಸಂಸತ್ತು ಬ್ರಿಟಿಷರ ಕಾಲದ್ದಾಗಿದ್ದು, ಎಡ್ವಿನ್ ಲುಟ್ಯಿನ್ಸ್ ಮತ್ತು ಹರ್ಬರ್ಟ್ ಬೇಕರ್ ಅವರು ವಿನ್ಯಾಸಗೊಳಿಸಿ ನಿರ್ಮಿಸಿದ್ದರು. ಇದನ್ನು ಕಟ್ಟಿದ್ದು 1921ರ ಫೆಬ್ರವರಿ 12ರಂದು ಶಂಕುಸ್ಥಾಪನೆ ನೆರವೇರಿಸಿ ಮುಂದಿನ ಆರು ವರ್ಷಗಳಲ್ಲಿ ಆಗಿನ ಕಾಲದಲ್ಲಿ 83 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಳಿಸಲಾಗಿತ್ತು. ನೂತನ ಭವನ 2022ರಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ನಿರ್ಮಾಣ ಪೂರ್ಣಗೊಳ್ಳಲಿದೆ.

ಸೆಂಟ್ರಲ್ ವಿಸ್ತಾ ಕಂಪೆನಿ ಹೊಸ ತ್ರಿಕೋಣ ರಚನೆಯ ಸಂಸತ್ತು ಕಟ್ಟಡವನ್ನು, ಕೇಂದ್ರ ಸಚಿವಾಲಯ ಮತ್ತು 3 ಕಿಲೋ ಮೀಟರ್ ಉದ್ದದ ರಾಜ್ ಪಥ್ ರಸ್ತೆಯ ಮರು ನವೀಕರಣವನ್ನು ನಡೆಸಲಿದೆ. ರಾಜ್ ಪಥ್ ರಸ್ತೆಯ ಮರು ನವೀಕರಣ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಇರುತ್ತದೆ.


SHARE THIS

Author:

0 التعليقات: