ಹೊಸ ಆರಂಭದ ಸಮಯವಿದು: ಬೈಡನ್
ವಾಷಿಂಗ್ಟನ್: 'ಗಾಯಗಳನ್ನು ಮರೆತು, ಎಲ್ಲರೂ ಒಗ್ಗಟ್ಟಿನಿಂದ ಮುಂದಡಿ ಇಡುವ ಮೂಲಕ ಹೊಸ ಆರಂಭಕ್ಕೆ ಸಜ್ಜಾಗೋಣ' ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಅಧ್ಯಕ್ಷ ಜೋ ಬೈಡನ್ ಹೇಳಿದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತಾವು ಗೆಲುವು ಸಾಧಿಸಿದ್ದನ್ನು 'ಎಲೆಕ್ಟೋರಲ್ ಕಾಲೇಜ್' ದೃಢಪಡಿಸಿದ ನಂತರ ಬೈಡನ್ ಅವರು ಮಾತನಾಡಿದರು.
'ಎಲೆಕ್ಟೋರಲ್ ಕಾಲೇಜ್'ನ ಒಟ್ಟು ಸದಸ್ಯರ ಸಂಖ್ಯೆ 538. ಈ ಪೈಕಿ ಬೈಡನ್ ಅವರಿಗೆ 270 ಮತಗಳು ಬಿದ್ದಿದ್ದು, ಶ್ವೇತಭವನ ಪ್ರವೇಶಿಸಲು ಅರ್ಹತೆ ಪಡೆದಿದ್ದಾರೆ. ಆದರೆ, ತಮ್ಮ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿರದ ಟ್ರಂಪ್ ಅವರು, ಬೈಡನ್ ಆಯ್ಕೆಯನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ.
ತಮ್ಮ ತವರು ವಿಲ್ಮಿಂಗ್ಟನ್ನಲ್ಲಿ ಮಾತನಾಡಿದ ಬೈಡನ್ ಅವರು, 'ಅಮೆರಿಕದ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪ್ರಯತ್ನ ನಡೆಯಿತು. ಬೆದರಿಸುವ ತಂತ್ರವೂ ನಡೆಯಿತು. ಆದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲ ಒತ್ತಡಗಳನ್ನು ಎದುರಿಸಿ ಪುಟಿದೆದ್ದಿತು. ತಾನು ಬಲಿಷ್ಠ ಎಂಬುದನ್ನೂ ಸಾಬೀತುಪಡಿಸಿತು' ಎಂದರು.
'ಜನರು ನೀಡಿದ ತೀರ್ಪನ್ನು ರದ್ದುಗೊಳಿಸಲು ಟ್ರಂಪ್ ಯತ್ನಿಸಿದರು. ಆದರೆ, ನಮ್ಮ ಸಂವಿಧಾನ, ಈ ನೆಲದ ಕಾನೂನು ಹಾಗೂ ಜನರ ಇಚ್ಛಾಶಕ್ತಿಯೇ ಕೊನೆಗೆ ಗೆದ್ದಿತು' ಎಂದೂ ಬೈಡನ್ ಹೇಳಿದರು.
0 التعليقات: