Thursday, 31 December 2020

ಗ್ರಾ.ಪಂ. ಚುನಾವಣೆ : ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ನಡೆಗೆ ಆಯೋಗ ಆಕ್ಷೇಪ


 ಗ್ರಾ.ಪಂ. ಚುನಾವಣೆ : ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ನಡೆಗೆ ಆಯೋಗ ಆಕ್ಷೇಪ

ಬೆಂಗಳೂರು,ಜ.1- ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ರಾಜಕೀಯ ಪಕ್ಷಗಳು ಬಿಂಬಿಸಿಕೊಳ್ಳುತ್ತಿರುವುದಕ್ಕೆ ಚುನಾವಣಾ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಪಕ್ಷ ರಹಿತವಾಗಿದ್ದು, ಅಭ್ಯರ್ಥಿಗಳು ಯಾವುದೇ ರಾಜಕೀಯ ಹಿನ್ನೆಲೆಯಲ್ಲಿ ಸ್ಪರ್ಧೆ ಮಾಡಿರುವುದಿಲ್ಲ.

ಆದರೂ ಎಲ್ಲಾ ರಾಜಕೀಯ ಪಕ್ಷಗಳು ನಾವೇ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸುತ್ತಿದ್ದೇವೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದೆ. ನಮ್ಮ ಬೆಂಬಲಿತ ಅಭ್ಯರ್ಥಿಗಳೇ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಕಡೆ ಗೆಲುವು ಸಾಧಿಸಿದ್ದಾರೆ ಎನ್ನುವುದಕ್ಕೆ ರಾಜಕೀಯ ಪಕ್ಷಗಳ ಬಳಿ ಯಾವ ಆಧಾರವಿದೆ. ರಾಜಕೀಯ ಪಕ್ಷಗಳ ಚಿಹ್ನೆಯಿಂದ ಸ್ಪರ್ಧಿಸದಿರುವಾಗ ಅದನ್ನು ನಮ್ಮ ಪಕ್ಷದ ಚಿಹ್ನೆ ಹೇಳಲು ಯಾವ ಆಧಾರವಿದೆ ಎಂದು ಚುನಾವಣಾ ಆಯೋಗ ಮೂಲಭೂತ ಪ್ರಶ್ನೆ ಎತ್ತಿದೆ.

ಮೊದಲಿನಿಂದಲೂ ಈ ಚುನಾವಣೆಯು ರಾಜಕೀಯ ರಹಿತವಾಗಿದೆ. ಆದರೂ ಪ್ರಚಾರದ ವೇಳೆಯೂ ಅಭ್ಯರ್ಥಿಗಳ ಪರವಾಗಿ ಜನಪ್ರತಿನಿಧಿಗಳು ಪ್ರಚಾರ ಮಾಡುವುದಕ್ಕೆ ತಾವು ಸೂಚನೆ ಕೊಟ್ಟಿದ್ದೇವು. ಇದೀಗ ಫಲಿತಾಂಶ ಹೊರಬಿದ್ದ ನಂತರ ನಮ್ಮ ಪಕ್ಷವೆ ಹೆಚ್ಚು ಗೆದ್ದಿದೆ ಎಂದು ಹೇಳುತ್ತಿರುವುದು ಚುನಾವಣಾ ವ್ಯವಸ್ಥೆಗೆ ಮಾಡಿದ ಅಪಮಾನ ಎಂದು ಅಸಮಾಧಾನ ಹೊರಹಾಕಿದೆ.

ಮಾಧ್ಯಮಗಳಿಗೂ ಕೂಡ ನಾವು ಗೆದ್ದ ಅಭ್ಯರ್ಥಿಗಳನ್ನು ರಾಜಕೀಯ ಪಕ್ಷಗಳ ಜೊತೆ ಬಿಂಬಿಸಬಾರದೆಂದು ನಿರ್ದೇಶನ ನೀಡಿದ್ದೆವು. ಆದರೆ ಪ್ರಜಾಪ್ರಭುತ್ವದ 4ನೇ ರಂಗ ಎನಿಸಿದ ಮಾಧ್ಯಮಗಳು ಕೂಡ, ಇಂತಹ ರಾಜಕೀಯ ಪಕ್ಷಗಳು ಮುನ್ನಡೆ ಸಾಧಿಸಿವೆ ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದೆ. ಕಳೆದ ಎರಡು ದಿನಗಳಿಂದ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಂದ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ಗಮನಿಸುತ್ತಿದ್ದೇವೆ.

ಸೂಕ್ಷ್ಮವಾಗಿ ಆಲಿಸುತ್ತಿದ್ದೇವೆ. ನಿಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದಿರುವುದಕ್ಕೆ ಪುರಾವೆಗಳು ಇಲ್ಲದಿರುವಾಗ ಈ ರೀತಿ ಹೇಳಿಕೆಗಳು ಕೊಡುವುದು ಸರಿಯಲ್ಲ. ಚುನಾವಣಾ ಮಾರ್ಗಸೂಚಿಗಳಿರುವುದು ಏತಕ್ಕೆ ಎಂದು ಪ್ರಶ್ನಿಸಿದೆ. ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ ಮತ್ತು ಪುರಸಭೆಗಳಿಗೆ ಚುನಾವಣೆ ನಡೆದಾಗ ನಿರ್ಧಿಷ್ಟ ರಾಜಕೀಯ ಪಕ್ಷದ ಹಿನ್ನೆಲೆಯಲ್ಲಿ ಸ್ಪರ್ಧೆ ಮಾಡಿರುತ್ತಾರೆ.

ಆದರೆ ಇದು ಪಕ್ಷ ರಹಿತ ಚುನಾವಣೆ ಎಂದು ಹೇಳಿದ್ದರೂ ನಮ್ಮ ಪಕ್ಷ ಗೆದ್ದಿದೆ, ಅವರು ಸೋತಿದ್ದಾರೆ, ಮತ್ತೊಬ್ಬರಿಗೆ, ಹಿನ್ನಡೆ, ನಮ್ಮದು ಮುನ್ನಡೆ ಎಂದು ಬಿಂಬಿಸುವುದು ಯಾವುದೇ ರಾಜಕೀಯ ಪಕ್ಷಗಳಿಗೆ ಶೋಭೆಯಲ್ಲ. ಚುನಾವಣಾ ಆಯೋಗ ಹೊರಡಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಮನವಿ ಮಾಡಿದೆ. ನಿನ್ನೆ ಗ್ರಾಪಂ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಪಕ್ಷದ ಬೆಂಬಲಿತ ಶೇ.60ರಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಹೇಳಿಕೊಂಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿಗಿಂತ ಕಾಂಗ್ರೆಸ್ ಶೇ.65ರಷ್ಟು ಗೆದ್ದಿದೆ ಎಂದು ಹೇಳಿದ್ದರು. ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ತಿರುಗೇಟು ಕೊಟ್ಟಿದ್ದ ಜೆಡಿಎಸ್ ನಮ್ಮ ಪಕ್ಷವೂ ಕೂಡ ನಿರೀಕ್ಷೆಗಿಂತ ಹೆಚ್ಚಿನ ಫಲಿತಾಂಶ ಬಂದಿದೆ ಎಂದು ಹೇಳಿತ್ತು. ಹೀಗೆ ರಾಜಕೀಯ ಪಕ್ಷಗಳು ಸೋಲುಗೆಲುವು, ಲಾಭನಷ್ಟದ ಲೆಕ್ಕಾಚಾರ ಹಾಕುತ್ತಿರುವುದಕ್ಕೆ ಆಯೋಗ ಅಸಮಾಧಾನ ಹೊರಹಾಕಿದೆ.


SHARE THIS

Author:

0 التعليقات: