Thursday, 10 December 2020

ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ : ಆತಂಕದಲ್ಲಿ ಗೋವಾದ ಮಾಂಸ ವ್ಯಾಪಾರಿಗಳು


 ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ : ಆತಂಕದಲ್ಲಿ ಗೋವಾದ ಮಾಂಸ ವ್ಯಾಪಾರಿಗಳು

ಪಣಜಿ: ಕರ್ನಾಟಕ ವಿಧಾನಸಭೆ ಯಿಂದ ಹೊಸ ಕಠಿಣ 'ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣೆ ವಿಧೇಯಕ 2020' ಜಾರಿಗೆ ಬಂದ ಪರಿಣಾಮ ನೆರೆಯ ಗೋವಾದಲ್ಲೂ ಭಾರಿ ಪರಿಣಾಮ ಬೀರಲಿದ್ದು, ರಾಜ್ಯದ ಗೋಮಾಂಸ ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮಾಂಸ ವ್ಯಾಪಾರಿಗಳು ಮತ್ತು ಮಾರಾಟಗಾರರು ತಿಳಿಸಿದ್ದಾರೆ.

ಗೋವಾ ಸಂಪೂರ್ಣವಾಗಿ ಕರ್ನಾಟಕದ ಮೇಲೆ ಗೋಮಾಂಸ ಪೂರೈಕೆಗಾಗಿ ಅವಲಂಬಿಸಿದೆ. ಗೋವಾದ ಮಾಂಸದ ವ್ಯಾಪಾರಿಗಳು ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿರುವ ಕಸಾಯಿಖಾನೆಯಿಂದ ದನದ ಮಾಂಸ ತೆಗೆದುಕೊಂಡು ಹೋಗುತ್ತಾರೆ ಅಥವಾ ಗೋವಾ ಮಾಂಸ ಕಾಂಪ್ಲೆಕ್ಸ್ ನಲ್ಲಿ ಜೀವಂತ ಜಾನುವಾರುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಮಾಂಸವನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಾರೆ.

ಸ್ಥಳೀಯವಾಗಿ ಲಭ್ಯವಿರುವ ಜಾನುವಾರುಗಳು ರಾಜ್ಯದ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ನಾವು ತಲೆತಲಾಂತರಗಳಿಂದ ಈ ವ್ಯವಹಾರವನ್ನು ಮಾಡುತ್ತಿದ್ದೇವೆ. ಕರ್ನಾಟಕ ಸರ್ಕಾರ ಈ ವಿಧೇಯಕಕ್ಕೆ ಒಪ್ಪಿಗೆ ನೀಡಿದರೆ ನಮ್ಮ ವ್ಯಾಪಾರ ಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ. ಈ ಬಗ್ಗೆ ಗೋವಾ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು' ಎಂದು ಮಾಂಸ ವ್ಯಾಪಾರಿ ಅನ್ವರ್ ಬೇಪಾರಿ ತಿಳಿಸಿದ್ದಾರೆ. ಇದೇ ಅನ್ವರ್ ಬೇಪಾರಿ ಅವರು ಮಾತನಾಡುತ್ತ ಗೋವಾದ ಶೇ.40ರಷ್ಟು ಜನರು ಗೋಮಾಂಸ ಸೇವನೆ ಮಾಡುವರು, ಪ್ರವಾಸೋದ್ಯಮ ಉದ್ಯಮ, ಹೋಟೆಲ್, ರೆಸ್ಟೋರೆಂಟ್ ಗಳಿಂದ ಬೇಡಿಕೆ ಹೆಚ್ಚಾಗಿ ವಿದೇಶಿ ಪ್ರವಾಸಿಗರಿಗೆ ಇದು ಅವಶ್ಯಕವಾಗಿರುವ ಆಹಾರವಾಗಿದೆ ಎಂದು ಅವರು ಹೇಳಿದ್ದಾರೆ.

ಮಾಂಸ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮನ್ನಾ ಬೇಪಾರಿ ಅವರು ಗೋವಾದಲ್ಲಿ ಮಾಂಸ ವ್ಯಾಪಾರದ ಭವಿಷ್ಯದ ಬಗ್ಗೆ ಇನ್ನೂ ಅನುಮಾನ ವ್ಯಕ್ತಪಡಿಸಿದ್ದಾರೆ. 'ಹೊಸ ಕಾನೂನು ಜಾರಿಗೆ ಬಂದ ಮೇಲೆ ಜೈಲು ಶಿಕ್ಷೆ ಯೊಂದಿಗೆ ಜಾನುವಾರು ಸಾಗಾಟಕ್ಕೂ ನಿಷೇಧ ಹೇರಲಾಗಿದೆ. ಇದರಿಂದ ಜಾನುವಾರುಗಳನ್ನು ಕಸಾಯಿಖಾನೆಗೆ ಗೋವಾಕ್ಕೆ ತರುವುದೇ ಕಷ್ಟ. ಮಹಾರಾಷ್ಟ್ರದಲ್ಲಿ ಈಗಾಗಲೇ ಕಾನೂನು ಜಾರಿಯಲ್ಲಿದೆ. ಈಗ ಕರ್ನಾಟಕದಲ್ಲಿ ಯೂ ಕಾನೂನು ಬದಲಾಗಿದೆ' ಎಂದು ಅವರು ಹೇಳಿದ್ದಾರೆ.


SHARE THIS

Author:

0 التعليقات: