ಹಾಸಿಗೆಯಲ್ಲೇ ಮೂತ್ರ ಮಾಡಿದ ಮಗ; ಸಿಟ್ಟಿಗೆದ್ದ ಅಪ್ಪ ಮಗನ ಕಥೆಯನ್ನೇ ಮುಗಿಸಿದ!
ಲಖನೌ: ಚಿಕ್ಕ ಮಕ್ಕಳು ಹಾಸಿಗೆಯಲ್ಲೇ ಮೂತ್ರ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಮಗ ಹಾಸಿಗೆಯಲ್ಲೇ ಮೂತ್ರ ಮಾಡಿದ ಎನ್ನುವ ಸಿಟ್ಟಿಗೆ ಅಪ್ಪ ಮಗನನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಐದು ವರ್ಷದ ಮಗನನ್ನು ಅನ್ಯಾಯವಾಗಿ ಕೊಂದ ಅಪ್ಪ ಇದೀಗ ಜೈಲು ಪಾಲಾಗಿದ್ದಾನೆ.
ಉತ್ತರ ಪ್ರದೇಶದ ಖಾನ್ಪುರ ಜಿಲ್ಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಘಟಂಪೂರ್ ಕೊಟ್ವಾಲಿ ಪ್ರದೇಶದ ಹತ್ರುವಾ ಗ್ರಾಮ ನಿವಾಸಿ ಸಾಂತ್ರಾಮ್ ಹೆಸರಿನ ವ್ಯಕ್ತಿ ಮಗನನ್ನೇ ಕೊಲೆ ಮಾಡಿರುವ ದುಷ್ಟ. ಈತನಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಐದು ವರ್ಷದ ಓರ್ವ ಗಂಡು ಮಗನಿದ್ದಾನೆ. ಮಂಗಳವಾರ ಹಾಸಿಗೆ ಮೇಲೆ ಮಲಗಿದ್ದ ಮಗ ಅಲ್ಲಿಯೇ ಮೂತ್ರ ಮಾಡಿಕೊಂಡಿದ್ದಾನೆ. ಅದಕ್ಕೇ ಸಿಟ್ಟಿಗೆದ್ದ ಸಾಂತ್ರಾನ್ ಮಗನಿಗೆ ಹೊಡೆಯಲಾರಂಭಿಸಿದ್ದಾನೆ. ಅಪ್ಪ ಹೊಡೆಯುತ್ತಿದ್ದಂತೆ ಮಗ ಜೋರಾಗಿ ಕೂಗಿಕೊಳ್ಳಲು ಆರಂಭಿಸಿದ್ದಾನೆ. ಮಗುವಿನ ತಾಯಿ ಎಷ್ಟೇ ಬೇಡಿಕೊಂಡರೂ ಸಾಂತ್ರಾನ್ ಮಗುವಿಗೆ ಹೊಡೆಯುವುದನ್ನು ನಿಲ್ಲಿಸಿಲ್ಲ. ಮಗು ಅಳುವುದರ ಜತೆ ಉಸಿರಾಡುವುದನ್ನು ನಿಲ್ಲಿಸುವವರೆಗೂ ಆತ ಮಗುವಿಗೆ ಹೊಡೆದಿದ್ದಾನೆ.
ಈ ರೀತಿ ಮಗುವನ್ನು ಕೊಂದ ಸಾಂತ್ರಾನ್ ಕುಟುಂಬದೊಂದಿಗೆ ತನ್ನ ಊರಾದ ಹರ್ಮೀಪುರಕ್ಕೆ ಹೊರಟಿದ್ದಾನೆ. ಮಗ ಸತ್ತಿರುವ ವಿಚಾರವನ್ನು ಯಾರಿಗೂ ಹೇಳುವಂತಿಲ್ಲ ಎಂದು ಹೆಂಡತಿ ಮಕ್ಕಳಿಗೆ ಎಚ್ಚರಿಸಿದ್ದಾನೆ. ಆದರೆ ಗಂಡನ ಕಣ್ಣು ತಪ್ಪಿಸಿ, ಹೆಂಡತಿ ಆಕೆಯ ತಮ್ಮನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಆತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಸಾಂತ್ರಾನ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
0 التعليقات: