ಮಹಿಳೆ, ಮಕ್ಕಳ ರಕ್ಷಣೆಗೆ ನಿರ್ಭಯ ಯೋಜನೆ; ಚಿತ್ರದುರ್ಗದಲ್ಲಿ ರಸ್ತೆಗಿಳಿದ ಪೊಲೀಸ್ ಬೈಕ್ಗಳು
ಚಿತ್ರದುರ್ಗ (ಡಿ. 16): ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಶೋಷಣೆಯನ್ನು ತಡೆಯಲು ಚಿತ್ರದುರ್ಗ ಜಿಲ್ಲಾ ಪೋಲೀಸರು ಹೊಸ ಯೋಜನೆಯೊಂದನ್ನು ಪರಿಚಯ ಮಾಡುತ್ತಿದ್ದಾರೆ. ಅದರಲ್ಲೂ ಹೊತ್ತಲ್ಲದ ಹೊತ್ತಲ್ಲಿ ಆಸರೆಯಿಲ್ಲದೆ ಅಶಕ್ತರಾಗಿ ಸಿಕ್ಕ ಸಿಕ್ಕವರ ಬಳಿ ಸಹಾಯ ಕೇಳುತ್ತಿದ್ದ ಅದೆಷ್ಟೋ ಒಂಟಿ ಮಹಿಳೆಯರು, ಯುವತಿಯರ ರಕ್ಷಣೆಗೆ ನಿರ್ಭಯ ಯೋಜನೆ ಶಕ್ತಿ ನೀಡಲಿದೆ. ಕೇಂದ್ರ ಸರ್ಕಾರದ ನಿರ್ಭಯ ಯೋಜನೆಯಡಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಗೆ ಹೊಸ 23 ಮೋಟಾರ್ ಬೈಕ್ಗಳನ್ನು ಪೊಲೀಸ್ ಠಾಣೆಗಳಿಗೆ ನೀಡಲಾಗಿದೆ.
ನಗರದ ಡಿಎಆರ್ ಮೈದಾನದಲ್ಲಿ ಮಂಗಳವಾರ ಎಲ್ಲಾ ಠಾಣೆಯ ಮಹಿಳಾ ಸಹಾಯವಾಣಿ ಕೇಂದ್ರಗಳಿಗೆ ಹಾಗೂ ಮಾನವ ಕಳ್ಳ ಸಾಗಾಣಿಕಾ ನಿಷೇಧದ ಉದ್ದೇಶಕ್ಕೆ ಹಂಚಿಕೆಯಾಗಿರುವ ಬೈಕುಗಳನ್ನು ವಿತರಿಸಿದರು. ನಮ್ಮ ದೇಶ ಹಾಗೂ ರಾಜ್ಯದಲ್ಲಿ ಮಹಿಳೆಯರ ಮೇಲೆ ಆಗುವ ಶೋಷಣೆ ತಡೆಯಬೇಕು, ಅವರಿಗೂ ಸ್ವತಂತ್ರ ಸಿಗಬೇಕು, ನಿರ್ಭಯದಿಂದ ಓಡಾಡಬೇಕು ಎಂಬುದು ಸ್ವಾತಂತ್ರ್ಯ ಹೋರಾಟಗಾರು, ರಾಜಕೀಯ ನಾಯಕರು, ಮಹಿಳಾ ಹೋರಾಟಗಾರ್ತಿಯರ ಒಕ್ಕೊರಲ ಕೂಗು. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ಎಂಟು ದಶಕಗಳು ಕಳೆಯುತ್ತಾ ಬಂದರೂ ಇವರೆಲ್ಲರ ಆಶಯ ಮಾತ್ರ ಇನ್ನೂ ಈಡೇರಿಲ್ಲ.
ಒಂದೆಡೆ ಅಪ್ರಾಪ್ತ ಬಾಲಕಿಯರು, ಸೇರಿದಂತೆ ಯುವತಿ, ಮಹಿಳೆಯರ ಮೇಲೆ ಒಂದಲ್ಲಾ ಒಂದು ಅತ್ಯಾಚಾರ, ಹಲ್ಲೆಗಳು ನಡೆದಿವೆ. ಅದರಲ್ಲಿ 2012 ಡಿಸೆಂಬರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ ಪ್ರಕರಣ ರಾಷ್ಟ್ರ ರಾಜಧಾನಿ ಸೇರಿದಂತೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆದ ಬಳಿಕ, ಅತ್ಯಾಚಾರಕ್ಕೆ ಒಳಪಟ್ಟ ನಿರ್ಭಯಾ ಹೆಸರಲ್ಲಿ ದೇಶದ ಮಹಿಳೆಯರ ಭದ್ರತೆ, ಮಹಿಳಾ ಪೊಲೀಸ್ ವಾಲಂಟರಿ ಯೋಜನೆಗಳ ಬಳಕೆಗೆ ಸ್ಥಾಪನೆ ಮಾಡಲಾಗಿದೆ. ಈ ಯೋಜನೆಯ ನಿಧಿಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯಗಳನ್ನು ತಡೆಗಟ್ಟುವುದಕ್ಕಾಗಿಯೇ ಭಾರತ ಸರ್ಕಾರದ ನಿರ್ಭಯ ಯೋಜನೆಯಡಿಯಲ್ಲಿ ನಿರ್ಭಯ ದ್ವಿಚಕ್ರ ವಾಹನ ನೀಡಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿನ 22 ಪೋಲೀಸ್ ಠಾಣೆಗಳಿಗೆ ತಲಾ ಒಂದೊಂದು ಹಾಗೂ ಮಹಿಳಾ ಠಾಣೆಗೆ ಎರಡು ಸೇರಿದಂತೆ ಹೀರೋ ಗ್ಲಾಮರ್ ಡಿಸ್ಕ್ ಸೆಲ್ಫ್ ಕಾಸ್ಟ್ ಬಿಎಸ್6 ಬೈಕ್ಗಳನ್ನು ಕೊಡಲಾಗಿದೆ. ಇದರಿಂದ ಮಾನವ ಕಳ್ಳ ಸಾಗಣೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದಂತಹ ಪ್ರಕರಣಗಳು ಕಂಡು ಬಂದರೆ ತಕ್ಷಣ ಹೊಸ ಬೈಕ್ ಗಳ ಮೂಲಕ ಸ್ಥಳಕ್ಕೆ ಧಾವಿಸಿ ಅನಾಹುತಗಳನ್ನು ತಪ್ಪಿಸಲು ಹಗಲೂ ರಾತ್ರಿ ಎಚ್ಚರ ವಹಿಸಲಾಗುತ್ತದೆ.
ಈ ಕುರಿತು ಮಾತನಾಡಿದ ಎಸ್ಪಿ ರಾಧಿಕಾ, ಈಗಾಗಲೆ ನೀಡಿರುವ ಎಲ್ಲಾ ಮೂಲಸೌಕರ್ಯಗಳನ್ನು ಉಪಯೋಗಿಸಿಕೊಂಡು ಮಹಿಳೆ ಮತ್ತು ಮಕ್ಕಳ ಮೇಲಾಗುತ್ತಿರುವ ಶೋಷಣೆಯನ್ನು ತಡೆಗಟ್ಟುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಪೊಲೀಸರಿಗೆ ಸೂಚಿನೆ ನೀಡಿದರು.ಇನ್ನು ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಓಬ್ವವ ಪಡೆ ಜೊತೆಗೆ ನಿರ್ಭಯ ಬೈಕ್ಗಳನ್ನು ಬಳಸಿಕೊಂಡು ಅಪರಾಧ ನಿಯಂತ್ರಿಸುವಲ್ಲಿ ಯಶಸ್ವಿಯಾಗಬೇಕು ಎಂದು ಹೇಳಿದರು.(ವರದಿ : ವಿನಾಯಕ ತೊಡರನಾಳ್)
0 التعليقات: