ಭ್ರಷ್ಟಾಚಾರ ನಿಗ್ರಹ ವಿಶೇಷ ಕೋರ್ಟ್ ಜಿಲ್ಲೆಗೊಂದು ಸ್ಥಾಪನೆಯಾಗಲಿ: ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್
ನವದೆಹಲಿ: ವಿವಿಧ ಹಣಕಾಸು ಅಕ್ರಮ, ತೆರಿಗೆ ವಂಚನೆ ಮತ್ತು ಭ್ರಷ್ಟಾಚಾರ ನಿಗ್ರಹ ವಿಶೇಷ ಕೋರ್ಟ್ ಜಿಲ್ಲೆಗೊಂದರಂತೆ ಒಂದು ವರ್ಷದೊಳಗೆ ಸ್ಥಾಪಿಸಲು ಎಲ್ಲ ಹೈಕೋರ್ಟ್ಗಳಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿದೆ.
ಬಿಜೆಪಿ ನಾಯಕ ಹಿರಿಯ ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ್ ಈ ಪಿಐಎಲ್ ದಾಖಲಿಸಿದ್ದು, ಜಿಲ್ಲೆಗೊಂದರಂತೆ ಭ್ರಷ್ಟಾಚಾರ ನಿಗ್ರಹ ವಿಶೇಷ ಕೋರ್ಟ್ ಸ್ಥಾಪಿಸುವುದಕ್ಕೆ ಹೈಕೋರ್ಟ್ಗಳಿಗೆ ಸೂಚನೆ ನೀಡಬೇಕು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಗೃಹ ಸಚಿವಾಲಯ, ಕಾನೂನು ಸಚಿವಾಲಯ ಮತ್ತು ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳನ್ನು ಪ್ರತಿವಾದಿಯನ್ನಾಗಿಸಿದ್ದಾರೆ.
ಅಡ್ವೋಕೇಟ್ ಅಶ್ವನಿ ಕುಮಾರ್ ದುಬೆ ಅವರ ಮೂಲಕ ಈ ಪಿಐಎಲ್ ಹಾಕಿಸಿರುವ ಉಪಾಧ್ಯಾಯ್, ವಿವಿಧ ಕೋರ್ಟ್ಗಳಲ್ಲಿ ಬಹುಕಾಲದಿಂದ ಬಾಕಿ ಇರುವ ಹಣಕಾಸಿನ ಅಕ್ರಮ ಮತ್ತು ಇತರೆ ಸಂಬಂಧಿತ ಕೇಸ್ಗಳ ವಿಚಾರವನ್ನು ಎತ್ತಿ ತೋರಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ, ಗಣತಂತ್ರವಾಗಿ 70 ವರ್ಷಗಳಾಗಿದ್ದರೂ ಕಾಳಧನ, ಬೇನಾಮಿ ಆಸ್ತಿ, ಆದಾಯ ಮೀರಿದ ಆಸ್ತಿ, ಲಂಚ, ಲೇವಾದೇವಿ, ತೆರಿಗೆ ವಂಚನೆ ಮತ್ತು ಇತರೆ ಪ್ರಕರಣಗಳ ವಿಚಾರಣೆ ಸಮಪರ್ಕವಾಗಿ ಪೂರ್ತಿಗೊಳ್ಳದೇ ಬಾಕಿ ಉಳಿದಿದೆ. ಇದನ್ನು ತಪ್ಪಿಸುವ ಸಲುವಾಗಿ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
0 التعليقات: