Thursday, 17 December 2020

ನಾರಿನ ಛಾವಣಿ, ಮಣ್ಣಿನ ನೆಲದ ಮನೆಯಲ್ಲಿ ವಾಸಿಸುತ್ತಿರುವ ನಾಲ್ಕು ಬಾರಿಯ ಶಾಸಕ ಮಹಬೂಬ್ ಆಲಮ್!


ನಾರಿನ ಛಾವಣಿ, ಮಣ್ಣಿನ ನೆಲದ ಮನೆಯಲ್ಲಿ ವಾಸಿಸುತ್ತಿರುವ ನಾಲ್ಕು ಬಾರಿಯ ಶಾಸಕ ಮಹಬೂಬ್ ಆಲಮ್!

ಬರ್ಸೋಯಿ,ಡಿ.17: ಬಿಹಾರದ ಬಲರಾಮಪುರ ಸಮೀಪದ ಶಿವನಂದಪುರ ಎಂಬ ಗ್ರಾಮದಲ್ಲಿನ ರಸ್ತೆಯಲ್ಲಿ ಹೇಗೂ ಕಷ್ಟಪಟ್ಟು ಒಮ್ಮೆಗೆ ಒಂದು ಕಾರನ್ನು ಚಲಾಯಿಸಿಕೊಂಡು ಹೋಗಬಹುದು. ರಸ್ತೆಯ ಇಕ್ಕೆಲದಲ್ಲಿರುವ ಮನೆಗಳಲ್ಲಿ ಬಹುತೇಕ ಒಂದೇ ಮಹಡಿಯ ಕುಚ್ಛಾ ಛಾವಣಿ ಹೊಂದಿರುವ ಮನೆಗಳು. ಈ ಮನೆಗಳ ನಡುವೆ ನಾರಿನಿಂದ ಮಾಡಿರುವ ಛಾವಣಿ ಹಾಗೂ ಮಣ್ಣಿನ ನೆಲ, ಒಂದು ಸಣ್ಣ ಡಿಟಿಎಚ್ ಆಯಂಟೆನಾ ಹೊಂದಿರುವ ಮನೆಯೊಂದಿದೆ. ಈ ಮನೆಯಲ್ಲೇ ಮೊನ್ನೆ ಬಿಹಾರ ಚುನಾವಣೆಯಲ್ಲಿ 50,000 ಮತಗಳಿಂದ ವಿಜಯಿಯಾದ ಶಾಸಕ ಮಹಬೂಬ್ ಆಲಮ್ ವಾಸಿಸುತ್ತಿದ್ದಾರೆ.

ಕೈತಾರ್ ಜಿಲ್ಲೆಯಲ್ಲಿ ತಮ್ಮ ಪ್ರತಿಸ್ಫರ್ಧಿಯಾಗಿದ್ದ ಬರುಣ್ ಕುಮಾರ್ ಝಾ ರನ್ನು ಸಿಪಿಐ ಪಕ್ಷದ ಅಭ್ಯರ್ಥಿಯಾಗಿದ್ದ ಮಹಬೂಬ್ ಆಲಮ್ 50,000 ಮತಗಳ ಅಂತರದಿಂದ ಸೋಲಿಸಿದ್ದರು. ಆಲಮ್ ಮನೆಯ ಮುಂದೆ ಹಲವಾರು ಪ್ಲಾಸ್ಟಿಕ್ ಕುರ್ಚಿಗಳಿವೆ. ಹಲವಾರು ಮಂದಿ ದಿನವೂ ಅವರನ್ನು ಭೇಟಿಯಾಗಿ ತಮ್ಮ ಮನವಿಗಳನ್ನು ಸಲ್ಲಿಸುತ್ತಾರೆ. ಇತ್ತೀಚೆಗಷ್ಟೇ ಪುಟ್ಟ ಮಗುವಿನ ಜೊತೆಗೆ ತಮ್ಮ ಸಣ್ಣ ಮನೆಯಲ್ಲಿ ಕುಳಿತ ಆಲಮ್ ಫೋಟೊ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿತ್ತು.

ಮಹಬೂಬ್ ಆಲಮ್ ತಾವು ಸಲ್ಲಿಸಿದ್ದ ಚುನಾವಣಾ ಅಫಿದಾವಿತ್ ನಲ್ಲಿ, ಬ್ಯಾಂಕ್ ಅಕೌಂಟ್ ನಲ್ಲಿ 30,000ರೂ. 9 ಲಕ್ಷ ಮೌಲ್ಯವಿರುವ ಜಮೀನು, ಒಂದು ಸ್ಕಾರ್ಪಿಯೋ ಕಾರು (ಅದು ಅಪಘಾತದ ಬಳಿಕ ಬಳಕೆಗೆ ಅನರ್ಹವಾಗಿದೆ ಎಂದು ಅವರೇ ಹೇಳುತ್ತಾರೆ) ಇವಿಷ್ಟನ್ನು ನಮೂದಿಸಿದ್ದರು. ಆಲಮ್ ರಿಗೆ 4 ಮತ್ತು 9 ವರ್ಷದ ಇಬ್ಬರು ಮಕ್ಕಳಿದ್ದು, ಅವರಿಬ್ಬರೂ ಸಮೀಪದ ಸರಕಾರಿ ಶಾಲೆಗೆ ತೆರಳುತ್ತಿದ್ದಾರೆ. ಮೊನ್ನೆ ನಡೆದ ಚುನಾವಣೆಯಲ್ಲಿ ಜಯಶಾಲಿಯಾಗುವುದರೊಂದಿಗೆ ಒಟ್ಟು ನಾಲ್ಕು ಬಾರಿ ಆಲಮ್ ರವರು ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

'ನಾನು ಸಾಮಾನ್ಯ ಜೀವನಶೈಲಿಯಲ್ಲಿ ಬದುಕಲು ಇಷ್ಟಪಡುತ್ತೇನೆ. ಎರಡು ಹೊತ್ತಿನ ಊಟಕ್ಕೆ ಕಷ್ಟಪಡುವಂತಹ ಕೆಲವು ಮಂದಿ ಈಗಲೂ ನನ್ನ ಕ್ಷೇತ್ರದಲ್ಲಿದ್ದಾರೆ. ಹೀಗಿರುವಾಗ ನನಗೆ ಆಡಂಬರದ ಬದುಕಿನ ಅವಶ್ಯಕತೆಯಿಲ್ಲ. ಇದು ಕಮ್ಯೂನಿಸಂ ವಾದ ಅಲ್ಲ, ಆದರ್ಶವಾದವಷ್ಟೇ. ನನಗೆ ಬರುವ 80,000ರೂ. ಸಂಬಳವನ್ನು ನಾನು ಪಕ್ಷಕ್ಕೆ ನೀಡುತ್ತಿದ್ದೇನೆ' ಎನ್ನುತ್ತಾರೆ ಆಲಮ್.

ಅವರ ಚುನಾವಣಾ ಅಫಿದಾವಿತ್ ನಲ್ಲಿ ಆಲಮ್ ವಿರುದ್ಧ 10 ಪ್ರಕರಣಗಳು ದಾಖಲಾದ ಕುರಿತು ನಮೂದಿಸಲಾಗಿತ್ತು. ಕೊಲೆ, ಗುಂಪು ಘರ್ಷಣೆ, ಅಪಾಯಕಾರಿ ಆಯುಧಗಳ ಬಳಕೆ ಮುಂತಾದ ಪ್ರಕರಣಗಳು ದಾಖಲಾಗಿತ್ತು. ಈ ಕುರಿತು ಆಲಮ್ ಹೇಳುವುದೇನೆಂದರೆ, 'ಇದರಲ್ಲೆಲ್ಲಾ ನನ್ನನ್ನು ವೃಥಾ ಸಿಲುಕಿಸಲಾಗಿದೆಯಷ್ಟೇ, ಜನರ ಜಮೀನನ್ನು ಉಳಿಸಿಕೊಳ್ಳುವ ಸಲುವಾಗಿ ನಾವು ಹೋರಾಟ ಮಾಡುತ್ತೇವೆ. ಯಾರಾದರೂ ಅನ್ಯಾಯವೆಸಗಿದರೆ ಸ್ವಯಂ ರಕ್ಷಣೆಯ ಹಕ್ಕನ್ನೂ ನಮ್ಮ ಸಂವಿಧಾನ ನೀಡಿದೆ ಎನ್ನುತ್ತಾರೆ ಆಲಮ್.

ಸಿಪಿಎಂ ನ ಎಸ್'ಎಫ್'ಐ ಮೂಲಕ ವಿದ್ಯಾರ್ಥಿ ನಾಯಕನಾಗಿ ಮೂಡಿಬಂದಿದ್ದ ಮಹಬೂಬ್ ಆಲಮ್ ಸದ್ಯ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 'ಈ ಬಾರಿ ನನಗೆ ಹಲವಾರು ಕೆಲಸಗಳು ಮಾಡಿ ಮುಗಿಸಬೇಕಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಆಟೋರಿಕ್ಷಾ ಚಾಲಕರು ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಧನವನ್ನುಒದಗಿಸುವುದು ಹಾಗೂ ಜನರಿಗೆ ಎನ್ನಾರ್ಸಿ ಮತ್ತು ಸಿಎಎ ಕುರಿತು ಮಾಹಿತಿ ನೀಡುವುದು ಮುಂತಾದ ಕಾರ್ಯಗಳನ್ನು ಮಾಡಬೇಕಾಗಿದೆ. ಬಲರಾಂಪುರದಲ್ಲಿ ಹೆಚ್ಚಾಗಿ ಮುಸ್ಲಿಮರಿದ್ದು, ದಲಿತ ಸಮುದಾಯದವರೂ ಜೊತೆಗಿದ್ದಾರೆ. ಅವರೆಲ್ಲರೂ ಎನ್ನಾರ್ಸಿ ಮತ್ತು ಸಿಎಎ ಕುರಿತು ಭಯಪೀಡಿತರಾಗಿದ್ದಾರೆ' ಎಂದು ಆಲಮ್ ಹೇಳುತ್ತಾರೆ.

ತಮ್ಮ ಜನರ ಸಮಸ್ಯೆಗಳ ಕುರಿತು ಮಹಬೂಬ್ ಆಲಮ್ ಅಸೆಂಬ್ಲಿಯಲ್ಲಿ ಮಾತನಾಡುತ್ತಾರೆ. ಬರ್ಸೋಯಿಗೆ ಅಗತ್ಯವಿರುವ ಸೇತುವೆ, ಅಬದ್ಪುರದಲ್ಲೊಂದು ಆಸ್ಪತ್ರೆ ಹಾಗೂ ವಿಳಂಬವಾಗುತ್ತಿರುವ ರೈತರ ಸಹಾಯಧನದ ಕುರಿತೂ ಅವರು ಅಸೆಂಬ್ಲಿಯಲ್ಲಿ ದನಿಯೆತ್ತಿದ್ದಾರೆ.SHARE THIS

Author:

0 التعليقات: