ಅಫ್ಘಾನಿಸ್ತಾನದಲ್ಲಿ ಕಾರ್ ಬಾಂಬ್ ಸ್ಫೋಟ : 8 ಮಂದಿ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ
ಕಾಬೂಲ್ : ಉಗ್ರರು ನಡೆಸಿದ ಕಾರ್ ಬಾಂಬ್ ಸ್ಪೋಟದಲ್ಲಿ ಎಂಟು ಮಂದಿ ಸಾವನ್ನಪ್ಪಿ, ಹದಿನೈದಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ನಡೆದಿದೆ.
ಉಗ್ರರು ಇಲ್ಲಿನ ಸಂಸದ ಖಾನ್ ಮೊಹಮ್ಮದ್ ವರ್ದಕ್ ಅವರನ್ನು ಗುರಿಯಾಗಿಸಿ ದಾಳಿ ನಡೆಸಿದ್ದು ಪರಿಣಾಮ ಶಾಸಕ ಸಣ್ಣಪುಟ್ಟ ಗಾಯಗಳಿಂದ ಪಾರಾದರೆ, ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಮಹಿಳೆ, ಮಕ್ಕಳು ಸೇರಿದಂತೆ ಹದಿನೈದಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಆಂತರಿಕ ಸಚಿವಾಲಯ ಸ್ಪಷ್ಟಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ, ಅಲ್ಲದೆ ಕಳೆದ ಕೆಲವು ದಿನಗಳಲ್ಲಿ ನೂರಾರು ಮಂದಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಇಂದಿನ ಘಟನೆಗೆ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲ ಎನ್ನಲಾಗಿದೆ.
ಲೋಗರ್, ನಂಗರ್ಹಾರ್, ಹೆಲ್ಮಂಡ್ ಮತ್ತು ಬಡಾಖಾನ್ ಪ್ರಾಂತ್ಯಗಳಲ್ಲಿ ರವಿವಾರ ಪ್ರತ್ಯೇಕ ಬಾಂಬ್ ಸ್ಫೋಟಗಳು ನಡೆದಿದ್ದು ಘಟನೆಯಲ್ಲಿ ಹಲವು ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.
ಕಳೆದ ಶುಕ್ರವಾರ ಮಧ್ಯ ಘಜ್ನಿ ಪ್ರಾಂತ್ಯದಲ್ಲಿ ರಿಕ್ಷಾವೊಂದರಲ್ಲಿ ಬಾಂಬ್ ಸ್ಫೋಟ ನಡೆಸಿ 11 ಮಕ್ಕಳು ಸೇರಿದಂತೆ ಕನಿಷ್ಠ 15 ನಾಗರಿಕರು ಸಾವನ್ನಪ್ಪಿದ್ದರು.
ಕಳೆದ ಮೂರು ತಿಂಗಳುಗಳಲ್ಲಿ ದೇಶಾದ್ಯಂತ 35 ಆತ್ಮಹತ್ಯಾ ದಾಳಿಗಳು ಮತ್ತು 507 ಸ್ಫೋಟಗಳನ್ನು ನಡೆಸುವ ಮೂಲಕ ತಾಲಿಬಾನ್ 487 ನಾಗರಿಕರನ್ನು ಕೊಂದು 1,049 ಜನರನ್ನು ಗಾಯಗೊಳಿಸಿದೆ ಎಂದು ಅಫಘಾನ್ ಆಂತರಿಕ ಸಚಿವಾಲಯ ಹೇಳಿದೆ.
0 التعليقات: