ಸರ್ಕಾರ ಮತ್ತು ರೈತರ ಮಧ್ಯೆ 6ನೇ ಸುತ್ತಿನ ಮಾತುಕತೆ: ಕೊನೆಯಾಗಲಿದೆಯೇ ಇಂದು ರೈತರ ಪ್ರತಿಭಟನೆ?
ನವದೆಹಲಿ: ಕೇಂದ್ರ ಸರ್ಕಾರ ಮತ್ತು ರೈತ ಪ್ರತಿನಿಧಿಗಳ ಮಧ್ಯೆ ಬುಧವಾರ 6ನೇ ಸುತ್ತಿನ ಮಾತುಕತೆ ನಡೆಯಲಿದೆ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಇಂದು ಮಾತುಕತೆಯನ್ನು ಮುಕ್ತ ಮನಸ್ಸಿನಿಂದ ನಡೆಸಲಾಗುತ್ತದೆ. ರೈತರ ಪ್ರತಿಭಟನೆ ಇಂದು ಕೊನೆಯಾಗುವ ಆಶಾಭಾವನೆಯಲ್ಲಿ ಸರ್ಕಾರವಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಖಾತೆ ರಾಜ್ಯ ಸಚಿವ ಸೊಮ್ ಪ್ರಕಾಶ್ ಹೇಳಿದ್ದಾರೆ.
ಆದರೆ ರೈತರಿಗೆ ಮಾತ್ರ ಇಂದಿನ ಮಾತುಕತೆ ಫಲಪ್ರದವಾಗಬಹುದು ಎಂಬ ಆಶಾವಾದವಿಲ್ಲ. ಈಗಾಗಲೇ 5 ಸುತ್ತು ಮಾತುಕತೆ ಮುಗಿದಿದೆ. ಇಂದು ಕೂಡ ಪರಿಹಾರ ಸಿಗಬಹುದು ಎಂಬ ಭಾವನೆ ನಮಗಿಲ್ಲ. ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಜಂಟಿ ಕಾರ್ಯದರ್ಶಿ ಸುಖ್ ವಿಂದರ್ ಸಿಂಗ್ ಸಬ್ರ ಹೇಳಿದ್ದಾರೆ.
ಇನ್ನು ಭಾರತೀಯ ಕಿಸಾನ್ ಸಂಘಟನೆಯ ರಾಕೇಶ್ ಟಿಕೈಟ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ದೇಶದಲ್ಲಿ ಶಕ್ತಿಯುತವಾದ ವಿರೋಧ ಪಕ್ಷವಿರಬೇಕು. ಅವರಿಗೆ ಸರ್ಕಾರ ಹೆದರಬೇಕು, ಆದರೆ ನಮ್ಮ ದೇಶದಲ್ಲಿ ಇಂದು ಸರ್ಕಾರಕ್ಕೆ ವಿರುದ್ಧವಾದ ಶಕ್ತಿಶಾಲಿ ಪ್ರತಿಪಕ್ಷವಿಲ್ಲ. ಇದರಿಂದಾಗಿಯೇ ಇಂದು ರೈತರು ಬೀದಿಗೆ ಬಂದಿದ್ದಾರೆ. ವಿರೋಧ ಪಕ್ಷದವರು ಹರಿದ ಟೆಂಟ್ ಗಳಲ್ಲಿ ಕುಳಿತು ರಸ್ತೆಗಳಲ್ಲಿ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಹೇಳಿದರು.
ನಿನ್ನೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ರೈತ ಪ್ರತಿನಿಧಿಗಳು ಇಂದಿನ ಮಾತುಕತೆ ವೇಳೆ ಕ್ರಾಂತಿಕಾರಿ ಪರಿಹಾರಗಳನ್ನು ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ತಿಳಿಸಿದ್ದಾರೆ.
0 التعليقات: