Wednesday, 30 December 2020

ಯೆಮನ್‌ ವಿಮಾನ ನಿಲ್ದಾಣದಲ್ಲಿ ಸ್ಫೋಟ: 26 ಸಾವು


ಯೆಮನ್‌ ವಿಮಾನ ನಿಲ್ದಾಣದಲ್ಲಿ ಸ್ಫೋಟ: 26 ಸಾವು

ಸನಾ(ಯೆಮನ್‌): ನೂತನವಾಗಿ ರಚನೆಯಾದ ಸಚಿವ ಸಂಪುಟದ ಸಿಬ್ಬಂದಿಯಿದ್ದ ವಿಮಾನವೊಂದು ಇಳಿದ ಕೆಲವೇ ಕ್ಷಣಗಳ ನಂತರ ಯೆಮನ್‌ನ ಏಡನ್‌ ವಿಮಾನ ನಿಲ್ದಾಣದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 26 ಜನರು ಮೃತಪಟ್ಟಿದ್ದಾರೆ.

ಇರಾನ್‌ ಬೆಂಬಲಿತ ಹುತಿ ಬಂಡಾಯಗಾರರು ಈ ಹೇಡಿ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಎಲ್ಲ ಸಚಿವರೂ ಸುರಕ್ಷಿತವಾಗಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮತ್ತು ಸರ್ಕಾರಿ ಮೂಲಗಳು ತಿಳಿಸಿವೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಬಹುದು ಎನ್ನಲಾಗಿದೆ. 'ಸರ್ಕಾರದ ಎಲ್ಲ ಸದಸ್ಯರೂ ಸುರಕ್ಷಿತವಾಗಿದ್ದಾರೆ' ಎಂದು ಯೆಮನ್‌ನ ಪ್ರಧಾನಿ ಮೊಯೀನ್‌ ಅಬ್ದುಲ್‌ಮಲಿಕ್‌ ಸಯೀದ್‌ ಹೇಳಿದರು. ಸೌದಿ ಅರೇಬಿಯಾದಲ್ಲಿ ಯೆಮನ್‌ನ ರಾಷ್ಟ್ರಪತಿ ಅಬೆದ್ರಬ್ಬೊ ಮನ್ಸೂರ್‌ ಹಾದಿ ಅವರಿಂದ ಕೆಲ ದಿನಗಳ ಹಿಂದೆ ಪ್ರತಿಜ್ಞಾವಿಧಿ ಸ್ವೀಕರಿಸಿದ್ದ ಸಚಿವರು, ಏಡನ್‌ಗೆ ಆಗಮಿಸಿದ್ದರು.

2014ರಲ್ಲಿ ಹುತಿ ಬಂಡಾಯಕೋರರು ಸನಾ ವಶಕ್ಕೆ ಪಡೆದ ಸಂದರ್ಭದಲ್ಲಿ ಹಾದಿ, ಸೌದಿ ರಾಜಧಾನಿ ರಿಯಾದ್‌ಗೆ ಪಲಾಯನ ಮಾಡಿದ್ದರು.

ಮೊದಲ ಸ್ಫೋಟದ ಬಳಿಕ, ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ದಟ್ಟ ಹೊಗೆ ಆವರಿಸಿತ್ತು. ಈ ವೇಳೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ಜನರು ಸೇರುತ್ತಿದ್ದಂತೆಯೇ, ಎರಡನೇ ಸ್ಫೋಟ ಸಂಭವಿಸಿದೆ. ಕ್ಷಿಪಣಿ ಮಾದರಿಯ ಫಿರಂಗಿಯು ವಿಮಾನ ನಿಲ್ದಾಣದ ಮೇಲ್ಛಾವಣಿಗೆ ಅಪ್ಪಳಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ರಾಜಧಾನಿ ಸನಾ ಹಾಗೂ ಉತ್ತರದ ಹಲವು ಭಾಗಗಳನ್ನು ವಶಕ್ಕೆ ಪಡೆದಿರುವ ಹುತಿ ಬಂಡಾಯಕೋರರ ವಿರುದ್ಧ ಡಿ.18ರಂದು ಯೆಮನ್‌ ಸರ್ಕಾರ ಹಾಗೂ ದಕ್ಷಿಣದ ಪ್ರತ್ಯೇಕತಾವಾದಿಗಳು ಜೊತೆಗೂಡಿ ಸಂಪುಟ ರಚಿಸಿದ್ದರು.

'ಇರಾನ್‌ ಬೆಂಬಲಿತ ಹುತಿ ಉಗ್ರರ ಈ ಕೃತ್ಯವು, ನಮ್ಮ ದೇಶಭಕ್ತಿಯ ಕರ್ತವ್ಯವನ್ನು ಮುಂದುವರಿಸಲು ಅಡ್ಡಿಪಡಿಸುವುದಿಲ್ಲ' ಎಂದು ಟ್ವಿಟರ್‌ ಮೂಲಕ ಯೆಮನ್‌ನ ಮಾಹಿತಿ ಸಚಿವ ಮೊಯಮ್ಮರ್‌ ಅಲ್‌-ಎರ್ಯಾನಿ ತಿಳಿಸಿದ್ದಾರೆ. 'ಸಚಿವ ಸಂಪುಟದ ಸಲ್ಲ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯ ಕುರಿತು ಅಂತರರಾಷ್ಟ್ರೀಯ ತನಿಖೆ ನಡೆಯಬೇಕು' ಎಂದು ಯೆಮನ್‌ ಸರ್ಕಾರದ ವಕ್ತಾರ ರಜಿ ಬಡಿ ಹೇಳಿದ್ದಾರೆ.SHARE THIS

Author:

0 التعليقات: