Monday, 21 December 2020

2021ಕ್ಕೆ ಹೊಸ ಪ್ರಬೇಧದ ಕೊರೋನಾ ಎಂಟ್ರಿ, ಮತ್ತೆ ಹೈಅಲರ್ಟ್..!


 2021ಕ್ಕೆ ಹೊಸ ಪ್ರಬೇಧದ ಕೊರೋನಾ ಎಂಟ್ರಿ, ಮತ್ತೆ ಹೈಅಲರ್ಟ್..!


ನವದೆಹಲಿ, ಡಿ.21- ಮಹಾಮಾರಿ ಕೋವಿಡ್-19ಗೆ ಲಸಿಕೆ ಸಿಕ್ಕೆ ಬಿಡ್ತು, ಇನ್ನು ಮುಂದೆ ನಿಶ್ಚಿಂತೆಯಿಂದ ಇರಬಹುದು ಎಂದು ನಿಟ್ಟುಸಿರು ಬಿಡುವ ಹಂತದಲ್ಲಿ ಇಂಗ್ಲೆಡ್‍ನಲ್ಲಿ ಪತ್ತೆಯಾಗಿರುವ ಹೊಸ ಪ್ರಬೇಧದ ಕೊರೊನಾ ವೈರಾಣು ಜಗತ್ತನ್ನು ಬೆಚ್ಚಿ ಬೀಳಿಸಿದೆ. ಕಳೆದ ವರ್ಷ ಡಿಸೆಂಬರ್‍ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‍ಗೆ ಕೋವಿಡ್-19 ಎಂದು ನಾಮಕರಣ ಮಾಡಲಾಗಿದೆ. ಈ ವೈರಸ್‍ನ್ನು ನಿರ್ಮೂಲನೆ ಮಾಡಲಾಗದೆ ಇಡೀ ವಿಶ್ವವೇ ತಲ್ಲಣಗೊಂಡು ಪರಿತಪಿಸುತ್ತಿದೆ.

2021ರ ಹೊಸ ವರ್ಷಾಚರಣೆಗೂ ಮುನ್ನವೇ ಇಂಗ್ಲೆಂಡ್‍ನಲ್ಲಿ ಕೋವಿಡ್-2020 ಪತ್ತೆಯಾಗಿದೆ. ಇದು ಈ ಮೊದಲು ಪತ್ತೆಯಾದ ಸೋಂಕಿಗಿಂತ ವಿಭಿನ್ನವಾಗಿದ್ದು, ಈಗಾಗಲೇ ಸಂಶೋಧಿಸಲಾಗಿರುವ ಲಸಿಕೆಗೆ ಇದು ನಾಶವಾಗುವ ಕುರಿತು ಅನುಮಾನಗಳು ಕೇಳಿ ಬಂದಿವೆ.

ಇಂಗ್ಲೆಂಡ್‍ನಲ್ಲಿ ಶನಿವಾರ ಹೊಸ ವೈರಸ್ ಪತ್ತೆಯಾಗಿದೆ. ಶನಿವಾರ 35,928 ಮಂದಿಗೆ ಹೊಸ ಸೋಂಕು ತಗುಲಿದೆ. ಹೊಸ ವರ್ಷದ ಸಂದರ್ಭದಲ್ಲೇ ಕಾಣಿಸಿಕೊಂಡಿರುವ ಹೊಸ ಮಾದರಿಯ ಕೋವಿಡ್ ಸೋಂಕು ಶೇ.70ರಷ್ಟು ವೇಗದಲ್ಲಿ ಹಬ್ಬುತ್ತಿದೆ. ಹಾಗಾಗಿ ಇಂಗ್ಲೆಂಡ್ ಸರ್ಕಾರ ಹೊಸ ವರ್ಷಾಚರಣೆ ಹಾಗೂ ಕ್ರಿಸ್‍ಮಸ್ ಸಂಭ್ರಮಾಚರಣೆಗಳನ್ನು ನಿಷೇಧಿಸಿದೆ. ಭಾನುವಾರ ಮಧ್ಯ ರಾತ್ರಿಯಿಂದ ಇಂಗ್ಲೆಂಡ್‍ನ ನಾಲ್ಕನೆ ಹಂತದ ಪ್ರದೇಶಗಳಲ್ಲಿ ಮತ್ತೆ ಲಾಕ್‍ಡೌನ್ ಜಾರಿ ಮಾಡಲಾಗಿದೆ. ಇದರಿಂದ ಸುಮಾರು 1.6 ಕೋಟಿ ಜನ ತಮ್ಮ ಮನೆಯಲ್ಲೇ ಉಳಿಯುವ ಪರಿಸ್ಥಿತಿ ಎದುರಾಗಿದೆ.

ಇಂಗ್ಲೆಂಡ್‍ನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಎಲ್ಲಾ ವಾಣಿಜ್ಯ ಹಾಗೂ ಸಾಮಾಜಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದ್ದವು. ಆದರೆ ಹೊಸ ಸೋಂಕಿನಿಂದ ಮತ್ತೆ ಜನ ಜೀವನ ಅಸ್ತವ್ಯಸ್ತವಾಗಿದೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಹೊಸ ಸೋಂಕಿನ ತಡೆಗೆ ಮುಂಜಾಗೃತಾ ಕ್ರಮಗಳನ್ನು ಘೋಷಿಸಿದ್ದಾರೆ. ಎಲ್ಲಾ ಸಂಭ್ರಮಾಚರಣೆಯನ್ನು ಮನೆಯ ಒಳಗೆ ನಡೆಸುವಂತೆ ಮನವಿ ಮಾಡಿದ್ದಾರೆ. ಹಿಂದಿಗಿಂತಲೂ ಹೆಚ್ಚಿನ ಬದ್ಧತೆಯಿಂದ ಹೊಸ ಸೋಂಕಿನ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದ್ದಾರೆ.

ಇಂಗ್ಲೆಡ್‍ನಲ್ಲಿ ಎದುರಾಗಿರುವ ಪ್ರಕ್ಷುಬ್ಧ ಸ್ಥಿತಿಯ ನಿಯಂತ್ರಣಕ್ಕೆ ಬೋರಿಸ್ ಅವರು ಸೋಮವಾರ ತುರ್ತು ಸಭೆ ನಡೆಸಿದ್ದಾರೆ. ಇಂಗ್ಲೆಂಡ್‍ನಿಂದ ಯಾರು ಹೊರ ಹೋಗದಂತೆ ಮತ್ತು ವಿದೇಶಿಗರು ಒಳ ಬರದಂತೆ ನಿರ್ಬಂಧ ಹೇರಲಾಗಿದೆ. ರೈಲ್ವೆ ಸ್ಟೆಷನ್‍ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಿ ಜನ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ.

ಈ ನಡುವೆ ಬೇರೆ ಬೇರೆ ದೇಶಗಳು ಕೂಡ ಇಂಗ್ಲೆಂಡ್ ಪ್ರಯಾಣದ ಮೇಲೆ ನಿರ್ಬಂಧ ಹೇರಿವೆ. ಮೊಟ್ಟ ಮೊದಲಿಗೆ ಕೆನಡಾ ಇಂಗ್ಲೆಂಡ್‍ನ ವಿಮಾನಗಳನ್ನು 72 ಗಂಟೆಗಳ ಕಾಲ ನಿಷೇಧಿಸಿದೆ. ಅಜೇಂಟೈನಾ, ಕೊಲಂಬಿಯಾ, ಪ್ರಾನ್ಸ್, ಐರ್ಲೆಂಡ್, ಬೆಲ್ಜಿಯಂ, ಇಟಲಿ, ಪೋರ್ಚುಗಲ್, ನೆದರ್‍ಲ್ಯಾಂಡ್, ಸೌದಿ ಅರೇಬಿಯಾ, ಟರ್ಕಿ ಸೇರಿದಂತೆ ಹಲವಾರು ದೇಶಗಳು ಇಂಗ್ಲೆಂಡ್ ದೇಶಗಳ ವಿಮಾನಗಳನ್ನು ನಿರ್ಬಂಧಿಸಿವೆ. ಕೆಲವು ದೇಶಗಳು 42 ಗಂಟೆ ವಿಮಾನಯಾನವನ್ನು ತಡೆ ಹಿಡಿದಿದ್ದರೆ ಇನ್ನೂ ಕೆಲವು ದೇಶಗಳು 72 ಗಂಟೆಗಳ ಕಾಲ ಇಂಗ್ಲೆಂಡ್ ಜೊತೆಗಿನ ಸಂಪರ್ಕವನ್ನು ಕಡಿತ ಮಾಡಲು ಮುಂದಾಗಿವೆ.

ಈಗ ಕಂಡು ಹಿಡಿಯಲಾದ ಕೊರೊನಾ ಲಸಿಕೆ ಕೋವಿಡ್ 19ಗೆ ಸೋಂಕನ್ನು ನಾಶ ಮಾಡುವ ಸಾಮಥ್ರ್ಯ ಹೊಂದಿದೆ. ಮುಂದಿನ ದಿನಗಳಲ್ಲಿ ಕಂಡು ಬರುವ ಹೊಸ ಬಗೆಯ ಸೋಂಕುಗಳು ಮತ್ತಷ್ಟು ಸವಾಲುಗಳನ್ನು ಒಡ್ಡಲಿವೆ ಎಂದು ಹೇಳಲಾಗುತ್ತಿದೆ.

ತುರ್ತು ಸಭೆ :

ಇಂಗ್ಲೆಂಡ್‍ನಲ್ಲಿ ಹೊಸ ಪ್ರಬೇಧದ ಕೊರೊನಾ ಸೋಂಕು ಪತ್ತೆಯಾಗಿರುವುದರಿಂದ ಭಾರತ ಸರ್ಕಾರ ಎಚ್ಚೆತ್ತುಕೊಂಡಿದ್ದು, ತುರ್ತು ಸಭೆ ಕರೆದು ಚರ್ಚೆ ನಡೆಸಿದೆ.ಸರ್ಕಾರ ಎಚ್ಚೆತ್ತುಕೊಂಡಿದ್ದು, ಹೊಸ ಸೋಂಕಿನ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.

ನಮ್ಮ ಸರ್ಕಾರ ಸಂಪೂರ್ಣ ಎಚ್ಚರಿಕೆಯಿಂದ ಇದೆ. ಕಳೆದ ಒಂದು ವರ್ಷದಿಂದ ಕೇಂದ್ರ ಸರ್ಕಾರ ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಭಾಯಿಸಿದೆ. ಜನತೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಇಂಗ್ಲೆಂಡ್‍ನಿಂದ ಬರುವ ವಿಮಾನಗಳನ್ನು ನಿಷೇಧಿಸಬೇಕು ಎಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸಿರುವ ಅವರು, ಹೊಸ ಸೋಂಕಿನಿಂದ ಅಪಾಯ ಹೆಚ್ಚಾಗಿದೆ ಎಂಬುದು ಊಹೆ ಮಾತ್ರ. ನಿಮ್ಮಷ್ಟಕ್ಕೆ ನೀವೆ ಊಹೆ ಮಾಡಿಕೊಂಡು ಮಾತನಾಡುವುದು, ಆತಂಕ ಪಡುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿದ್ದಾರೆ.

ಈ ನಡುವೆ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಇಂಗ್ಲೆಂಡ್ ಪ್ರಯಾಣದ ವಿಮಾನಗಳನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಟ್ವಿಟರ್‍ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇಂಗ್ಲೆಂಡ್‍ನಲ್ಲಿ ಹೊಸ ಸೋಂಕು ಹರಡುತ್ತಿರುವ ಪ್ರಮಾಣ ತೀವ್ರಗತಿಯಲ್ಲಿದೆ. ಹಾಗಾಗಿ ಇಂಗ್ಲೆಂಡ್‍ಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ.


SHARE THIS

Author:

0 التعليقات: