Monday, 14 December 2020

ವಿಸ್ಟ್ರಾನ್ ಕಂಪನಿಯಲ್ಲಿ ಗಲಾಟೆ; 156 ಮಂದಿ ಬಂಧನ


ವಿಸ್ಟ್ರಾನ್ ಕಂಪನಿಯಲ್ಲಿ ಗಲಾಟೆ; 156 ಮಂದಿ ಬಂಧನ


ಕೋಲಾರ, ಡಿಸೆಂಬರ್ 14: ಕೋಲಾರದ ನಸರಾಪುರದಲ್ಲಿರುವ ತೈವಾನ್ ಮೂಲದ ವಿಸ್ಟ್ರಾನ್ ಘಟಕದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 156 ಜನರನ್ನು ಬಂಧಿಸಲಾಗಿದೆ. ಸುಮಾರು 440 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್. ವಿ. ದೇಶಪಾಂಡೆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಸೂಕ್ತ ಭದ್ರತೆಯೊಂದಿಗೆ ವಿವಾದವನ್ನು ಸುಖಾಂತ್ಯಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೈಗಾರಿಕೋದ್ಯಮಿಗಳಿಗೆ, ಹೂಡಿಕೆದಾರರಿಗೆ ಉದ್ಯಮ ಸ್ನೇಹಿ ವಾತಾವರಣದ ಜೊತೆಗೆ ಸುರಕ್ಷತೆಯ ಭಾವ ಮೂಡಿಸುವುದು ಈ ಕ್ಷಣದ ಅಗತ್ಯತೆಯಾಗಿದೆ ಎಂದು ದೇಶಪಾಂಡೆ ಫೇಸ್ ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಉದ್ಯಮ ಸ್ನೇಹಿ ವಾತಾವರಣವನ್ನು ಹೊಂದಿರುವ ನಮ್ಮ ರಾಜ್ಯದಲ್ಲಿ ಅನೇಕ ಬೃಹತ್ ಕೈಗಾರಿಕೆಗಳು ಬಂಡವಾಳ ಹೂಡಿಕೆಯನ್ನು ಮಾಡಿರುವುದು ನಮಗೆ ಹೆಮ್ಮೆಯ ವಿಷಯ.

ಆದರೆ, 'ಆಯಪಲ್' ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕವಾದ ವಿಸ್ಟ್ರಾನ್ ಇನ್ಫೊಟೆಕ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕೆಲ ಕಾರ್ಮಿಕರು ಗುಂಪುಗೂಡಿ ಗಲಾಟೆ ಮಾಡಿದ್ದು ಹಾಗೂ ಕಂಪನಿಯ ಆಸ್ತಿಪಾಸ್ತಿಗಳನ್ನು ನಾಶ ಮಾಡಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.

ಮಾತುಕತೆ, ಸಂಧಾನಗಳ ಮೂಲಕ ಬಗೆಹರಿಸುವಂತಹ ಸಮಸ್ಯೆಯನ್ನು ದೊಡ್ಡದು ಮಾಡಿದ್ದಾರೆ. ಅತಿರೇಕದ ವರ್ತನೆಯಿಂದ ಕಾನೂನನ್ನು ಕೈಗೆತ್ತಿಕೊಂಡು ಹಿಂಸಾಚಾರಕ್ಕೆ ಇಳಿದಿರುವುದು ವಿಷಾದನೀಯ.

ಇದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರಬಹುದು. ಸರಕಾರವು ಇವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಮುಖ್ಯಮಂತ್ರಿಗಳು ತಕ್ಷಣ ಮಧ್ಯ ಪ್ರವೇಶಿಸಿ ಸೂಕ್ತ ಭದ್ರತೆಯೊಂದಿಗೆ ಇದನ್ನು ಸುಖಾಂತ್ಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.SHARE THIS

Author:

0 التعليقات: