Tuesday, 17 November 2020

ಭಾರತೀಯ ಸೇನೆ ಮೇಲೆ ಚೀನಾದಿಂದ 'ಮೈಕ್ರೋವೇವ್ ವೆಪನ್' ದಾಳಿ : ವರದಿ ಸತ್ಯಕ್ಕೆ ದೂರವಾದುದು ಎಂದು ಭಾರತ ಸ್ಪಷ್ಟನೆ

 

ಭಾರತೀಯ ಸೇನೆ ಮೇಲೆ ಚೀನಾದಿಂದ 'ಮೈಕ್ರೋವೇವ್ ವೆಪನ್' ದಾಳಿ : ವರದಿ ಸತ್ಯಕ್ಕೆ ದೂರವಾದುದು ಎಂದು ಭಾರತ ಸ್ಪಷ್ಟನೆ

ನವದೆಹಲಿ : ಲಡಾಖ್ ಗಡಿಯಲ್ಲಿ ಭಾರತೀಯ ಸೈನಿಕರ ವಿರುದ್ಧ ಚೀನಾ ಸೇನೆ 'ಮೈಕ್ರೋವೇವ್ ವೆಪನ್' ಬಳಸುತ್ತಿದೆ ಎಂಬ ವರದಿಗಳನ್ನು ಭಾರತ ತಳ್ಳಿ ಹಾಕಿದೆ.

ಪೂರ್ವ ಲಡಾಖ್ ಗಡಿಯಲ್ಲಿ ಭಾರತೀಯ ಸೈನಿಕರ ಮೇಲೆ ಚೀನಾ 'ಮೈಕ್ರೋವೇವ್ ಶಸ್ತ್ರಗಳನ್ನು ಬಳಸುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆ,ಈ ವರದಿ ಸತ್ಯಕ್ಕೆ ದೂರವಾದ್ದು. ಅಲ್ಲದೇ ಮೈಕ್ರೋವೇವ್ ಶಸ್ತ್ರಗಳ ಬಳಕೆಯಾಗಿಲ್ಲ ಎಂದೂ ಸ್ಪಷ್ಟಪಡಿಸಿದೆ.

ರೆನ್ಮಿನ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕ ಜಿನ್ ಕ್ಯಾನ್ರಾಂಗ್ ಭಾರತೀಯ ಸೈನಿಕರ ಮೇಲೆ ಚೀನಾ ಮೈಕ್ರೋವೇವ್ ಶಸ್ತ್ರಗಳನ್ನು ಪ್ರಯೋಗಿಸುತ್ತಿದೆ ಎಂದು ಹೇಳಿದ್ದು, ವಿದೇಶಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಕಳೆದ ಆಗಸ್ಟ್ 29ರಂದು ಪ್ಯಾಂಗಾಂಗ್ ಸರೋವರದ ಪ್ರದೇಶವನ್ನು ಆಕ್ರಮಿಸಿಕೊಂಡ ಭಾರತೀಯ ಸೈನಿಕರು, ಏಕಾಏಕಿ ವಾಂತಿ ಮಾಡಲು ಆರಂಭಿಸಿದರು. ಅವರಿಗೆ ಎದ್ದು ನಿಲ್ಲಲೂ ಸಾಧ್ಯವಾಗಲಿಲ್ಲ. ಇದಕ್ಕೆ ಚೀನಾ ಮೈಕ್ರೋವೇವ್ ಶಸ್ತ್ರಗಳನ್ನು ಬಳಸಿದ್ದೇ ಕಾರಣ ಎಂದು ಜಿನ್ ಕ್ಯಾನ್ರಾಂಗ್ ವಾದಿಸಿದ್ದರು.

ಈ ವರದಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಭಾರತೀಯ ಸೇನೆ, ಇಂತಹ ಯಾವುದೇ ಶಸ್ತ್ರಗಳ ಪ್ರಯೋಗ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಚೀನಾ ಜಾಗತಿಕ ಮಟ್ಟದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದೂ ಗಂಭೀರ ಆರೋಪ ಮಾಡಲಾಗಿದೆ.

ಮೈಕ್ರೋವೇವ್ ವೆಪನ್‌ಗಳು, ತುಂಬಾ ಸೂಕ್ಷ್ಮವಾಗಿದ್ದು, ಮಾನವನ ಚರ್ಮದೊಳಗೆ ನುಗ್ಗಿ ದೇಹದ ನೀರನ್ನು ಬಿಸಿ ಮಾಡುತ್ತದೆ. ಇದರಿಂದ ವ್ಯಕ್ತಿಗೆ ತಡೆಯಲು ಅಸಾಧ್ಯವಾದ ನೋವು ಉಂಟಾಗುತ್ತದೆ.


SHARE THIS

Author:

0 التعليقات: