ನಾಳೆಯಿಂದ ರಾಜ್ಯಾದ್ಯಂತ ವೈದ್ಯಕೀಯ ಕಾಲೇಜುಗಳು ಆರಂಭ
ಬೆಂಗಳೂರು, ನ.30- ಕೋವಿಡ್-19 ಕಾರಣಗಳಿಂದ ಕಳೆದ ಎಂಟು ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ವೈದ್ಯಕೀಯ ಕಾಲೇಜುಗಳು ನಾಳೆಯಿಂದ ರಾಜ್ಯಾದ್ಯಂತ ಆರಂಭವಾಗಲಿವೆ. ರಾಜ್ಯದಲ್ಲಿ ಕೋವಿಡ್ ಸೋಂಕು ಅಧಿಕೃತವಾಗಿ ಕಾಲಿಟ್ಟು ಲಾಕ್ಡೌನ್ ಘೋಷಣೆ ಮಾಡಿದ ಬಳಿಕ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು.
ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತರಗತಿಗಳು ಮಂಗಳವಾರ ಆರಂಭವಾಗಲಿವೆ. ಎನ್ಎಂಸಿ, ಯುಜಿಸಿ ಮಾರ್ಗಸೂಚಿಗಳ ಅನ್ವಯ ಕಾಲೇಜು ಆರಂಭಿಸಲಾಗುತ್ತಿದೆ. ಕಾಲೇಜುಗಳನ್ನು ಡಿ.1ರಿಂದ ಪುನರಾರಂಭಗೊಳಿಸಿ ತಕ್ಷಣವೇ ಪ್ರಾಯೋಗಿಕ ತರಗತಿಗಳನ್ನು ನಡೆಸಬೇಕು.
ವಿದ್ಯಾರ್ಥಿಗಳಿಗೆ ಬೋಧನೆಯನ್ನು ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ಮಾದರಿಯಲ್ಲಿ ನಡೆಸಬಹುದು ಎಂದು ಸೂಚನೆ ಕೊಡಲಾಗಿದೆ. ಪ್ರಾಕ್ಟಿಕಲ್ ಕ್ಲಾಸ್ಗಳನ್ನು ನಡೆಸಬೇಕು. ಬೋಧನಾ ತರಗತಿಗೆ ಆನ್ ಲೈನ್ ಅಥವ ಕಾಲೇಜಿಗೆ ಬರುವ ಆಯ್ಕೆ ವಿದ್ಯಾರ್ಥಿಗಳಿಗೆ ಮುಕ್ತವಾಗಿಡಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ನ.17ರಿಂದ ಕರ್ನಾಟಕದಲ್ಲಿ ಅಂತಿಮ ವರ್ಷದ ಪದವಿ ಕಾಲೇಜುಗಳು ಆರಂಭವಾಗಿವೆ. ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇದೇ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ.
ಕಾಲೇಜಿನ ಕೊಠಡಿಗಳ ಸ್ಯಾನಿಸೈಟ್, ವಿದ್ಯಾರ್ಥಿಗಳು, ಸಿಬ್ಬಂದಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ ಎಂದು ಯುಜಿಸಿ ಸುತ್ತೋಲೆಯಲ್ಲಿ ತಿಳಿಸಿದೆ. ಬಾಕಿ ಇರುವ ಪಠ್ಯಗಳನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ವೇಳಾಪಟ್ಟಿಯನ್ನು ಸಿದ್ಧಗೊಳಿಸಬೇಕು. ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ತರಬೇಕಿದೆ.
0 التعليقات: