Thursday, 26 November 2020

ಬೆಳಗ್ಗೆ ಬಂದ ಅಮಿತ್​ ಷಾ ಫೋನ್​ ಕರೆಗೆ ಸಿಎಂ ನಿರ್ಧಾರವೇ ಬದಲಾಯ್ತು!


 ಬೆಳಗ್ಗೆ ಬಂದ ಅಮಿತ್​ ಷಾ ಫೋನ್​ ಕರೆಗೆ ಸಿಎಂ ನಿರ್ಧಾರವೇ ಬದಲಾಯ್ತು!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಸಚಿವ ಸಂಪುಟ ಸಭೆ ನಡೆದಿದ್ದು, ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಮಹತ್ವದ ವಿಚಾರ ಬಗ್ಗೆ ಮಾಹಿತಿ ನೀಡಿದರು.

ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸುವ ಬಗ್ಗೆ ಇಂದು ಸಿಎಂ ತೀರ್ಮಾನ ಮಾಡಬೇಕಿತ್ತು. ಆದರೆ ಅವರು ಒಬಿಸಿಗೆ ಸೇರಿಸುವ ಶಿಫಾರಸಿನಿಂದ ಸದ್ಯಕ್ಕೆ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಸ್ವತಃ ಸಿಎಂ ಅವರೇ ಮಾತನಾಡಿದ್ದು, ನಾನು ದೆಹಲಿಗೆ ಹೋಗಿ ಬಂದ ನಂತರ ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಮಿತ್ ಷಾ ಜತೆ ಈಗಷ್ಟೇ ಮಾತನಾಡಿದ್ದೇನೆ. ಇನ್ನೆರಡು ದಿನದಲ್ಲಿ ಪಟ್ಟಿ ಬರಲಿದೆ ಎಂದರು.

ವೀರಶೈವ ಲಿಂಗಾಯತ ವಿಚಾರ ಕ್ಯಾಬಿನೆಟ್ ಅಜೆಂಡಾ ನೋಡಿ ಹೈಕಮಾಂಡ್ ಶಾಕ್ ಆಗಿದೆ. ಹಾಗಾಗಿ ಶುಕ್ರವಾರ ಬೆಳಗ್ಗೆಯೇ ಸಿಎಂ ಯಡಿಯೂರಪ್ಪಗೆ ಕರೆ ಮಾಡಿ ಮಾತುಕತೆ ನಡೆಸಿದ ಅಮಿತ್ ಷಾ, ಸದ್ಯ ಯಾವುದೇ ಸಮುದಾಯದ ನಿರ್ಧಾರ ಬೇಡ. ಎರಡ್ಮೂರು ದಿನದಲ್ಲಿ ಸಂಪುಟ ವಿಚಾರದಲ್ಲಿ ಗ್ರೀನ್ ಸಿಗ್ನಲ್ ಕೊಡ್ತೀವಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ನಿಗಮ ಮಂಡಳಿಗೆ ಸರಣಿ ನೇಮಕ ಮಾಡಿದ್ದ ಬಿಎಸ್​ವೈ ಶುಕ್ರವಾರ ತುರ್ತು ಸಂಪುಟ ಸಭೆಯ ಜತೆಗೆ ರಾಜ್ಯದ ಸಂಸದರ ಸಭೆಯನ್ನೂ ಕರೆದಿದ್ದರು. ಇಂದೇ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದೂ ಹೇಳಲಾಗಿತ್ತು. ಇದೀಗ ಕೇಂದ್ರದ ಜತೆ ಮಾತನಾಡಿ ಸಾಧಕ-ಬಾಧಕಗಳ ಬಗ್ಗೆ ಸಮಾಲೋಚಿಸಲು ಸಿಎಂ ನಿರ್ಧರಿಸಿದ್ದಾರೆ.


SHARE THIS

Author:

0 التعليقات: