ಬಿಹಾರದ ಪ್ರಗತಿಗಾಗಿ ಎನ್ಡಿಎ ಕುಟುಂಬವು ಒಟ್ಟಾಗಿ ಕೆಲಸ ಮಾಡಲಿದೆ: ಪ್ರಧಾನಿ ಮೋದಿ
ಪಟ್ನಾ: ನಾಲ್ಕನೇ ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದು, ಬಿಹಾರದ ಪ್ರಗತಿಗಾಗಿ ಎನ್ಡಿಎ ಕುಟುಂಬವು ಒಟ್ಟಾಗಿ ಕೆಲಸ ಮಾಡಲಿದೆ ಎಂದಿದ್ದಾರೆ.
ಮೋದಿಯವರು, 'ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರಿಗೆ ಅಭಿನಂದನೆಗಳು. ಅದೇರೀತಿ ಬಿಹಾರ ಸರ್ಕಾರದಲ್ಲಿ ಸಚಿವರುಗಳಾಗಿ ಪ್ರಮಾಣ ಸ್ವೀಕರಿಸಿದ ಎಲ್ಲರಿಗೂ ಅಭಿನಂದನೆಗಳು. ಎನ್ಡಿಎ ಕುಟುಂಬವು ಬಿಹಾರದ ಪ್ರಗತಿಗಾಗಿ ಒಟ್ಟಾಗಿ ಕೆಲಸ ಮಾಡಲಿದೆ. ಬಿಹಾರದ ಕಲ್ಯಾಣಕ್ಕಾಗಿ ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.
ನಿತೀಶ್ ಅವರೊಂದಿಗೆ ಬಿಜೆಪಿ ಶಾಸಕರಾದ ತಾರಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಂಪುಟ ದರ್ಜೆ ಸಚಿವರಾಗಿ ಜೆಡಿಯುನ ವಿಜಯ್ ಕುಮಾರ್ ಚೌಧರಿ, ವಿಜೇಂದ್ರ ಪ್ರಸಾದ್ ಯಾದವ್, ಅಶೋಕ್ ಚೌಧರಿ, ಮೇವಾ ಲಾಲ್ ಚೌಧರಿ, ಬಿಜೆಪಿಯ ಮಂಗಲ್ ಪಾಂಡೆ, ಅಮರಿಂದರ್ ಪ್ರತಾಪ್ ಸಿಂಗ್, ಎಚ್ಎಎಂ ಪಕ್ಷದ ಸಂತೋಶ್ ಕುಮಾರ್ ಸುಮನ್ ಹಾಗೂ ವಿಐಪಿ ಪಕ್ಷದ ಮುಕೇಶ್ ಸಾಹ್ನಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪ್ರಮಾಣವಚನ ಸಮಾರಂಭವನ್ನು ವಿರೋಧ ಪಕ್ಷ ಆರ್ಜೆಡಿ ಹಾಗೂ ಅದರ ನಾಯಕ ತೇಜಸ್ವಿ ಯಾದವ್ ಬಹಿಷ್ಕರಿಸಿದ್ದರು.
ಭಾನುವಾರ ನಡೆದ ಎನ್ಡಿಯ ಮೈತ್ರಿಕೂಟದ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆಮಾಡಲಾಗಿತ್ತು. ಬಿಜೆಪಿಯ ಹಿರಿಯ ನಾಯಕ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯ ಉಸ್ತುವಾರಿ ಭೂಪೇಂದ್ರ ಸಿಂಗ್ ಯಾದವ್ ಮತ್ತು ಚುನಾವಣಾ ಉಸ್ತುವಾರಿ ದೇವೇಂದ್ರ ಫಡಣವೀಸ್ ಅವರೂ ಸಭೆಗೆ ಹಾಜರಾಗಿದ್ದರು.
0 التعليقات: