ಬಿಹಾರದಲ್ಲಿ ಡಿಸಿಎಂ ಸ್ಥಾನಕ್ಕೆ ಪೈಪೋಟಿ : ರೇಣುದೇವಿ, ತಾರ್ಕಿಶೋರ್ ಪ್ರಸಾದ್ ಇಬ್ಬರು ಆಯ್ಕೆಯಾಗುವ ಸಾಧ್ಯತೆ
ಪಾಟ್ನಾ: ಬಿಹಾರದಲ್ಲಿ ಸಿಎಂ ಆಗಿ ನಿತೀಶ್ ಕುಮಾರ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಆದರೆ ಡಿಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಪರಿಣಾಮ ಬಿಹಾರದಲ್ಲೂ ಎರಡೆರಡು ಡಿಸಿಎಂ ಹುದ್ದೆ ಸೃಷ್ಟಿಸಲಾಗಿದ್ದು, ರೇಣುದೇವಿ, ತಾರ್ಕಿಶೋರ್ ಪ್ರಸಾದ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಆ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದ್ದು, 'ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಹೊಸ ಸಂಪುಟವು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೊಂದುವ ಸಾಧ್ಯತೆಯಿದೆ. ನಿತೀಶ್ ಕುಮಾರ್ ಮಿತ್ರಪಕ್ಷ ಬಿಜೆಪಿ ಭಾನುವಾರ ಕತಿಹಾರ್ ಶಾಸಕ ತಾರ್ಕಿಶೋರ್ ಪ್ರಸಾದ್ ಮತ್ತು ಬೆಟ್ಟಯ್ಯ ಶಾಸಕ ರೇಣು ದೇವಿ ಅವರನ್ನು ಶಾಸಕಾಂಗ ಪಕ್ಷದ ನಾಯಕ ಮತ್ತು ಉಪನಾಯಕನಾಗಿ ಆಯ್ಕೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ಬಿಜೆಪಿಯಿಂದ ಇಬ್ಬರು ಡಿಸಿಎಂ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಹಾರದ ಹಿರಿಯ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಅವರು ಜುಲೈ 2017 ರಿಂದ ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ಡಿಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಈಗ ಅವರು ಕೇಂದ್ರ ಸಚಿವ ಸಂಪುಟಕ್ಕೆ ಆಯ್ಕೆಯಾಗುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಬಿಹಾರದಲ್ಲಿ ಎರಡೆರಡು ಡಿಸಿಎಂ ಹುದ್ದೆ ಸೃಷ್ಟಿಸಲಾಗಿದೆ ಎಂದು ಹೇಳಲಾಗಿದೆ.
0 التعليقات: