ಕೋರ್ಟ್ನಲ್ಲಿ ಟ್ರಂಪ್ಗೆ ಮುಖಭಂಗ! ಪೆನ್ಸಿಲ್ವೇನಿಯಾ ಮರು ಎಣಿಕೆಗೆ ಆಗ್ರಹಿಸಿದ್ದ ಅರ್ಜಿ ವಜಾ
ವಾಷಿಂಗ್ಟನ್: ನ.3ರ ಅಧ್ಯಕ್ಷೀಯ ಚುನಾವಣೆಯ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ತೀವ್ರ ಹಿನ್ನಡೆಯಾಗಿದೆ. ಪೆನ್ಸಿಲ್ವೇನಿಯಾದ ಫಲಿತಾಂಶ ಪ್ರಶ್ನಿಸಿ ಟ್ರಂಪ್ ಪ್ರಚಾರ ತಂಡ ಸಲ್ಲಿಸಿದ್ದ ಅರ್ಜಿಯನ್ನು ಫೆಡರಲ್ ಜಡ್ಜ್ ಮ್ಯಾಥ್ಯೂ ಬ್ರ್ಯಾನ್ ವಜಾ ಮಾಡಿದ್ದಾರೆ.
ಟ್ರಂಪ್ ಅವರು ಯಾವುದೇ ಗಟ್ಟಿತನವಿಲ್ಲದ ವಾದ, ಸಾಕ್ಷ್ಯಗಳೇ ಇಲ್ಲದ ಊಹಾತ್ಮಕ ಆರೋಪಗಳನ್ನು ಹೊರಿಸಿದ್ದಾರೆ. ಅವರ ಅರ್ಜಿಯನ್ನು ಪರಿಗಣಿಸುವ ಅಗತ್ಯವೇ ಕಾಣುತ್ತಿಲ್ಲ. ಹೀಗಾಗಿ ಅರ್ಜಿ ವಜಾ ಮಾಡುತ್ತಿದ್ದೇವೆ ಎಂದು ನ್ಯಾಯಮೂರ್ತಿ ಮ್ಯಾಥ್ಯೂ ಹೇಳಿದ್ದಾರೆ. ವಾರದ ಹಿಂದಷ್ಟೇ ನ್ಯಾಯಮೂರ್ತಿ ಮ್ಯಾಥ್ಯೂ ಅವರಿಗೆ ಬೆದರಿಕೆ ಕರೆ ಬಂದಿದ್ದು ಭಾರೀ ಸುದ್ದಿಯಾಗಿತ್ತು.
ಮರುಎಣಿಕೆಗೆ ಆಗ್ರಹ:ಇದೇ ವೇಳೆ, ಜಾರ್ಜಿಯಾದಲ್ಲಿ ಮರು ಮತ ಎಣಿಕೆ ನಡೆಯಬೇಕು ಎಂದು ಕೋರಿ ಟ್ರಂಪ್ ಪ್ರಚಾರ ತಂಡ ಕೋರ್ಟ್ ಮೆಟ್ಟಿಲೇರಿದೆ. ಇತ್ತೀಚೆಗಷ್ಟೇ ರಿಪಬ್ಲಿಕನ್ ಬಾಹುಳ್ಯದ ಜಾರ್ಜಿಯಾದಲ್ಲಿ ಡೆಮಾಕ್ರಾಟ್ನ ಜೋ ಬೈಡೆನ್ 12 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈಗಾಗಲೇ ಇಲ್ಲಿ ಮರು ಮತ ಎಣಿಕೆ ನಡೆದು, ಬೈಡೆನ್ ಜಯ ಗಳಿಸಿದ್ದು ಸಾಬೀತಾಗಿತ್ತು. ಈಗ ಮತ್ತೆ ಟ್ರಂಪ್ ತಂಡ ಮರುಎಣಿಕೆಗೆ ಆಗ್ರಹಿಸಿರುವ ಕಾರಣ, ಚುನಾವಣಾ ಅಧಿಕಾರಿಗಳು 50 ಲಕ್ಷ ಮತಗಳನ್ನು ರೀಸ್ಕ್ಯಾನ್ ಮಾಡಿ ಎಣಿಸಬೇಕಾಗುತ್ತದೆ.
0 التعليقات: