ಹೆಜ್ಜೆ ಇಟ್ಟಲ್ಲಿ ನೀಲಿ ಬೆಳಕು! ಕರ್ನಾಟಕದ ಈ ಸ್ಥಳಕ್ಕೆ ಕಾಲಿಟ್ಟರೆ ಮಿಂಚಲಿದೆ ನೀಲಿ ಬಣ್ಣದ ಹೆಜ್ಜೆ ಗುರುತು
ಕಾರವಾರ: ಕುಮಟಾದ ವನ್ನಳ್ಳಿ ಕಡಲ ತೀರದಲ್ಲಿ ಯಾರಾದರೂ ಹೆಜ್ಜೆ ಇಟ್ಟಲ್ಲಿ ನೀಲಿ ಬೆಳಕು ಮೂಡುವ ಅಪರೂಪದ ವಿಡಿಯೋವೊಂದು ಜಾಲತಾಣಗಲ್ಲಿ ವೈರಲ್ ಆಗಿದೆ.
ರಾತ್ರಿಯ ಹೊತ್ತು ಯಾರಾದರೂ ಚಪ್ಪಲಿ ಹಾಕಿ ನಡೆದಾಡಿದರೆ, ಅವರ ಹೆಜ್ಜೆ ಇಟ್ಟಲ್ಲೆಲ್ಲ ನೀಲಿ ಬಣ್ಣ ಸ್ಫುರಿಸುತ್ತದೆ. ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ಮಾರ್ಚ್ ಹೊತ್ತಿಗೆ ಮಾಜಾಳಿ ಕಡಲ ತೀರದಲ್ಲಿ ಇಡೀ ಕಡಲು ರಾತ್ರಿ ವೇಳೆ ನೀಲಿಯಾಗಿ ರೇಡಿಯಂನಂತೆ ಹೊಳೆಯುವುದು ಕಂಡುಬಂದಿತ್ತು.
ಸಾಮಾನ್ಯ ಜನರಿಗೆ ಇದು ಅಚ್ಚರಿಯ ಅಂಶವಾಗಿದ್ದರೂ ಕಡಲಲ್ಲಿ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆ ಎಂಬುದು ಕಡಲ ಜೀವ ಶಾಸ್ತ್ರಜ್ಞರ ಅಭಿಪ್ರಾಯ.
ಡೈನೊಪ್ಲಾಗೆಲೆಟ್ ನಾಕ್ಟಿಲುಕ ಸಿಂಟಿಲನ್ಸ್ ಎಂಬ ಕೋಶವನ್ನು ಹೊಂದಿರುವ ಪಾಚಿಗಳು ಸಮುದ್ರದಲ್ಲಿ ಹೆಚ್ಚು ಬೆಳೆದರೆ ಹಗಲಿನ ಹೊತ್ತಿನಲ್ಲಿ ಹಸಿರಾಗಿಯೂ ರಾತ್ರಿ ನೀಲಿಯಾಗಿಯೂ ಹೊಳೆಯುತ್ತವೆ. ಇದನ್ನು ಜೀವ ದೀಪ್ತಿ ಎಂದು ಕರೆಯುವುದಾಗಿ ಕಡಲ ಜೀವ ಶಾಸ್ತ್ರಜ್ಞ ಡಾ. ಶಿವಕುಮಾರ ಹರಗಿ ಹೇಳುತ್ತಾರೆ.
0 التعليقات: