Thursday, 19 November 2020

ಸಚಿವ ಸಂಪುಟ ಪುನರ್‌ರಚನೆಗೆ ಬಿಜೆಪಿ ಶಾಸಕರ ಒತ್ತಾಯ

 

ಸಚಿವ ಸಂಪುಟ ಪುನರ್‌ರಚನೆಗೆ ಬಿಜೆಪಿ ಶಾಸಕರ ಒತ್ತಾಯ


ಬೆಂಗಳೂರು,ನ.19- ಸಚಿವ ಸಂಪುಟ ವಿಸ್ತರಣೆ ತೂಗಯ್ಯಾಲೆಯಾಗಿರುವ ಸಂದರ್ಭದಲ್ಲೇ ಹಾಲಿ ಸಂಪುಟದಲ್ಲಿರುವ ಕೆಲವು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸಬೇಕೆಂದು ಶಾಸಕರ ನಿಯೋಗ ಒತ್ತಾಯ ಮಾಡಿದೆ. ಈ ಸಂಬಂಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಲಿಂಗಣ್ಣ ಸೇರಿದಂತೆ ಮತ್ತಿತರ ಶಾಸಕರ ನಿಯೋಗವು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ, ತಮ್ಮನ್ನು ಸಂಪುಟಕ್ಕೆ ಪರಿಗಣಿಸುವಂತೆ ಮನವಿ ಮಾಡಿದರು.

3ರಿಂದ 4 ಬಾರಿ ಗೆದ್ದಿರುವ ಶಾಸಕರನ್ನು ಕಡೆಗಣಿಸಲಾಗಿದೆ. ಕೆಲವು ಸಚಿವರು ಸರ್ಕಾರ ಮತ್ತು ಪಕ್ಷಕ್ಕೆ ಹೆಸರು ತರುವ ಕೆಲಸವನ್ನು ಮಾಡುತ್ತಿಲ್ಲ. ಅಂಥವರನ್ನು ಸಂಪುಟದಿಂದ ಕೈಬಿಟ್ಟು ನಮಗೂ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯಾಧ್ಯಕ್ಷರ ಜೊತೆ ಸುದೀರ್ಘವಾಗಿ ಮಾತುಕತೆ ನಡೆಸಿದ ಶಾಸಕರ ತಂಡ ಹಾಲಿ ಸಂಪುಟವನ್ನೇ ಮುಂದುವರೆಸಿದರೆ ಮುಂಬರುವ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಗ್ರಾಮಪಂಚಾಯ್ತಿ ಚುನಾವಣೆಯನ್ನು ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಲವು ಸಚಿವರು ಶಾಸಕರ ಕೆಲಸಕಾರ್ಯಗಳನ್ನು ಮಾಡಿಕೊಡುತ್ತಿಲ್ಲ. ಕ್ಷೇತ್ರಗಳಿಗೆ ಬೇಕಾದ ಯೋಜನೆಗಳ ಅನುಷ್ಠಾನ ಮಾಡಲು ವಿಳಂಬ ಮಾಡುತ್ತಿದ್ದಾರೆ. ತಮಗೆ ಬೇಕಾದ ಶಾಸಕರಿಗೆ ಮಾತ್ರ ಕೆಲಸಕಾರ್ಯಗಳನ್ನು ಮಾಡಿಕೊಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕಾಗಲಿ ಅಥವಾ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವು ಸಚಿವರು ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಪುತ್ರ ವಿಜಯೇಂದ್ರ ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇವರು ಮಾಡುತ್ತಿರುವ ಆಪಾದನೆಗಳಿಗೂ ವಾಸ್ತವ ಅಂಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ಕಾರಣಕ್ಕಾಗಿ ನಾವು ಕೂಡ ಎಲ್ಲ ಬೆಳವಣಿಗೆಗಳನ್ನು ನೋಡಿಕೊಂಡು ಮೌನದಿಂದ ಇದ್ದೆವು. ಆದರೆ ಇತ್ತೀಚೆಗೆ ಕೆಲವು ಬೆಳವಣಿಗೆಗಳನ್ನು ನೋಡಿದರೆ ಸಹಿಸಲು ಸಾಧ್ಯವಾಗುತ್ತಿಲ್ಲ. 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ. ಅಸಮರ್ಥ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಮನವರಿಕೆ ಮಾಡಿದ್ದಾರೆ.

ಪಕ್ಷದ ಹಿತದೃಷ್ಟಿಯಿಂದ ನಾವು ಇದುವರೆಗೂ ಎಲ್ಲಿಯೂ ಕೂಡ ಪ್ರತ್ಯೇಕವಾದ ಸಭೆಗಳನ್ನು ನಡೆಸುವುದಾಗಲಿ ಇಲ್ಲವೇ ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸಿಲ್ಲ. ನಾವು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದು, ಸ್ಥಾನಮಾನ ಕೇಳುವುದು ತಪ್ಪಲ್ಲ. ಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಸ್ಥಾನ ಕೊಡುವುದಾದರೆ ಜನರಿಂದ ಆಯ್ಕೆಯಾದ ನಾವು ಸುಮ್ಮನಿರಬೇಕೆ ಎಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಸಚಿವರ ಯಾವುದೇ ಇಲಾಖೆಯಲ್ಲೂ ಯಡಿಯೂರಪ್ಪ ಆಗಲಿ ಅಥವಾ ವಿಜಯೇಂದ್ರ ಹಸ್ತಕ್ಷೇಪ ನಡೆಸಿಲ್ಲ. ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ದುರದ್ದೇಶಪೂರ್ವಕವಾಗಿ ಸುಳ್ಳು ಕತೆಗಳನ್ನು ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡದೆ ಪಕ್ಷದ ನಿಷ್ಠರಿಗೆ ಸ್ಥಾನಮಾನ ನೀಡಬೇಕೆಂದು ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ನಾವು ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದು, ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ನಮ್ಮನ್ನು ಪರಿಗಣಿಸಬೇಕೆಂದು ಅಧ್ಯಕ್ಷರಿಗೆ ಮನವರಿಕೆ ಮಾಡಿದ್ದೇವೆ. ನಾವೇನು ರಾಜಕೀಯ ಸನ್ಯಾಸಿಗಳಲ್ಲ. ನಮಗೂ ಕೂಡ ಮಂತ್ರಿಯಾಗುವ ಅರ್ಹತೆ ಇದೆ ಎಂದು ಹೇಳಿದರು.

ಸೋತವರೆಲ್ಲ ಮಂತ್ರಿಯಾಗುವುದಾದರೆ ಜನರಿಂದ ಆಯ್ಕೆಯಾದ ನಾವು ಸುಮ್ಮನಿರಬೇಕ? ಮೂರರಿಂದ ನಾಲ್ಕು ಬಾರಿ ಗೆದ್ದಿರುವ ಶಾಸಕರನ್ನು ಮಂತ್ರಿ ಮಾಡಬೇಕೆಂದು ಮನವಿ ಮಾಡಿದ್ದೇವೆ. ಅದಕ್ಕೆ ರಾಜ್ಯಾಧ್ಯಕ್ಷರು ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಕಳೆದ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರು. ಅಂಥವರು ಕೂಡ ಮಂತ್ರಿ ಸ್ಥಾನ ಆಕಾಂಕ್ಷಿಯಾದರೆ ನಮ್ಮ ಪಾಡೇನು, ಯಾವುದೇ ಕಾರಣಕ್ಕೂ ವರಿಷ್ಠರು ಅವರಿಗೆ ಸಚಿವ ಸ್ಥಾನ ನೀಡಬಾರದೆಂದು ನೇರವಾಗಿಯೇ ಹೇಳಿದರು.

ನಾವು ನಮ್ಮ ಭಾವನೆಗಳನ್ನು ಅಧ್ಯಕ್ಷರ ಮುಂದೆ ವ್ಯಕ್ತಪಡಿಸಿದ್ದೇವೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡುವ ಭರವಸೆ ಕೊಟ್ಟಿದ್ದಾರೆ. ಈ ಬಾರಿ ಸಂಪುಟದಲ್ಲಿ ನಮಗೆ ಅವಕಾಶ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.


SHARE THIS

Author:

0 التعليقات: