Sunday, 29 November 2020

ಖಾಸಗಿ ಕಾಲೇಜುಗಳಲ್ಲಿ ಕೃಷಿ ಕೋರ್ಸ್ ನಡೆಸಲು ಸರ್ಕಾರದ ಅನುಮತಿ ಸಾಧ್ಯತೆ!


 ಖಾಸಗಿ ಕಾಲೇಜುಗಳಲ್ಲಿ ಕೃಷಿ ಕೋರ್ಸ್ ನಡೆಸಲು ಸರ್ಕಾರದ ಅನುಮತಿ ಸಾಧ್ಯತೆ!

ಬೆಂಗಳೂರು: ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೇಶದ್ಯಾಂತ ರೈತರ ಪ್ರತಿಭಟನೆ ಭುಗಿಲೆದ್ದಿದೆ, ಇದೇ ವೇಳೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ಖಾಸಗಿ ಕಾಲೇಜುಗಳಿಗೆ ಕೃಷಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರ ಯೋಜನೆ ರೂಪಿಸುತ್ತಿದೆ.

ಹೊಸ ಭೂ ಸುಧಾರಣಾ ತಿದ್ದುಪಡಿ ಕಾಯಿದೆಯಿಂದ ಯಾರಾದರೂ ರಾಜ್ಯದಲ್ಲಿ ಭೂಮಿ ಖರೀದಿಸಲು ಅನುಕೂಲ ಇರುವುದರಿಂದ ಹಾಗೂ ಕೊರೋನಾ ಕಾರಣದಿಂದ ಜನ ಮತ್ತೆ ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ, ಹಾಗಾಗಿ ಕೃಷಿ ಸಂಬಂಧಿತ ಕೋರ್ಸ್ ಗಳ ಬೇಡಿಕೆ ಹೆಚ್ಚುತ್ತಿದೆ.

ಕರ್ನಾಟಕದಲ್ಲಿ ಕೃಷಿ ಸಂಬಂಧಿತ ಆರು ವಿವಿಗಳಿವೆ, ಬೆಂಗಳೂರು, ಧಾರವಾಡ, ಶಿವಮೊಗ್ಗ ಮತ್ತು ರಾಯಚೂರಿನಲ್ಲಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೀದರ್‌ನ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಬಾಗಲ ಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಇದರ ಅಡಿಯಲ್ಲಿ 26 ಸರ್ಕಾರಿ ಕಾಲೇಜುಗಳು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ನೀಡುತ್ತಿವೆ.

ಪ್ರತಿ ವರ್ಷ ಪ್ರವೇಶಾತಿ ಸಮಯದಲ್ಲಿ ಸುಮಾರು 4 ದಾಖಲಾತಿ ಮಾಡಲಾಗುತ್ತದೆ, ಈ ಆರು ವಿವಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಡಿಯಲ್ಲಿ ಬರುತ್ತವೆ. ಈ ವರ್ಷ ಸುಮಾರು 25 ಸಾವಿರದಿಂದ 35 ಸಾವಿರ ಅರ್ಜಿಗಳು ಬರುವ ಸಾಧ್ಯತೆಯಿದೆ. 4 ಸಾವಿರ ಸೀಟುಗಳಿಗೆ 1 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಯಾವಾಗಲೂ ಕೃಷಿ ಕೋರ್ಸ್ ಗಳಿಗೆ ಬೇಡಿಕೆ ಇರುತ್ತದೆ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಖಾಸಗಿ ಕಾಲೇಜುಗಳಲ್ಲಿ ಕೃಷಿ ಕೋರ್ಸ್ ಗಳನ್ನು ನಡೆಸಲು ಅನುಮತಿ ನೀಡಿವೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

ಅಲ್ಲಿ ಒಂದು ವಿಶ್ವವಿದ್ಯಾನಿಲಯವಿದ್ದು ಅಲ್ಲಿನ ಕಾಲೇಜುಗಳು ಈ ವಿವಿ ಅಡಿಯಲ್ಲಿ ಬರಲಿವೆ, ಹೀಗಾಗಿ ನಾವು ಕೂಡ ಅದೇ ರೀತಿಯ ಯೋಜನೆ ರೂಪಿಸಲು ಸಿದ್ಧತೆ ನಡೆಸುತ್ತಿದ್ದೇವೆ, ನಗರ ಪ್ರದೇಶಗಳಲ್ಲಿ ಯುವ ಜನತೆ ಕೃಷಿ ಬಗ್ಗೆ ಉತ್ಸಾಹ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.

2009 ರಲ್ಲಿ ರಾಜ್ಯ ಸರ್ಕಾರ ಕೃಷಿ ವಿಜ್ಞಾನ ವಿವಿಗಳ ಮಸೂದೆ ಪಾಸು ಮಾಡಿದ್ದು ಅದರಲ್ಲಿ ಖಾಸಗಿ ಕಾಲೇಜುಗಳು ಕೃಷಿ ಕೋರ್ಸ್ ನಡೆಸಲು ಅವಕಾಶ ನೀಡಿದೆ, ಆದರೆ 2017ರ ವರೆಗೆ ಅದರಲ್ಲಿ ಹೆಚ್ಚಿನ ಕೆಲಸವಾಗಿಲ್ಲ.

2017 ರಲ್ಲಿ ಸರ್ಕಾರ ಮಾನ್ಯತೆಗಾಗಿ ಅರ್ಜಿ ಕರೆಯಿತು, ಆರು ಖಾಸಗಿ ಕಾಲೇಜುಗಳು ಅರ್ಜಿ ಸಲ್ಲಿಸಿದವು, ಅವುಗಳಲ್ಲಿ ಮೂರು ಕಾಲೇಜು ಮಾತ್ರ ಅರ್ಹತೆ ಪಡೆದವು, ತಾಂತ್ರಿಕ ಸಮಿತಿ ಶಿಪಾರಸ್ಸಿನ ಪ್ರಕಾರ ಕಾಲೇಜುಗಳು 75 ಎಕರೆ ಭೂಮಿ ಹೊಂದಿರಬೇಕಾಗಿದೆ.

ಭೂ ಸುಧಾರಣಾ ತಿದ್ದುಪಡಿ ಕಾಯಿದೆ ಸಹಾಯದಿಂದ ಯುವಕರು ಕೃಷಿ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಹೀಗಾಗಿ ಹಳ್ಳಿ ಕಡೆ ವಾಪಾಸಾಗುತ್ತಿದ್ದಾರೆ, ಅನೇಕ ಕೃಷಿ ತಜ್ಞರು ಇರುವ ಕಾರಣ ಕೃಷಿ ಒಂದು ಉದ್ಯಮವಾಗಬಹುದು ಎಂದ ನಿವೃತ್ತ ರಿಜಿಸ್ಟ್ರಾರ್ ಎ ಬಿ ಪಾಟೀಲ್ ತಿಳಿಸಿದ್ದಾರೆ.


SHARE THIS

Author:

0 التعليقات: