Wednesday, 25 November 2020

ಹೈಕಮಾಂಡಿಗೆ ಹೊಸ ಫಾರ್ಮುಲಾ ರವಾನಿಸಿದ ಸಿಎಂ ಬಿಎಸ್‌ವೈ


 ಹೈಕಮಾಂಡಿಗೆ ಹೊಸ ಫಾರ್ಮುಲಾ ರವಾನಿಸಿದ ಸಿಎಂ ಬಿಎಸ್‌ವೈ

ಬೆಂಗಳೂರು,ನ.26- ಸಂಪುಟ ಪುನಾರಚನೆ ವಿಳಂಬವಾಗುವುದಾದರೆ ವಿಸ್ತರಣೆ ಮಾಡಲು ಅನುಮತಿ ನೀಡುವಂತೆ ಹೈಕಮಾಂಡ್‍ಗೆ ಮನವಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದು, 3+2 ಫಾರ್ಮುಲಾ ಅನುಸರಿಸಿ ಸಂಪುಟ ವಿಸ್ತರಣೆ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಇದರ ನಡುವೆಯೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರ ಕಚೇರಿಯ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲು ಸಚಿವರಾದ ಆರ್.ಅಶೋಕ್, ರಮೇಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ ಸೇರಿದಂತೆ ಅನೇಕರು ದೆಹಲಿಗೆ ತೆರಳಿರುವುದು ಬಿಜೆಪಿಯಲ್ಲಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮೇಲ್ನೋಟಕ್ಕೆ ಇದೊಂದು ಸೌಹಾರ್ದ ಭೇಟಿ ಎಂದು ಹೇಳುತ್ತಿದ್ದರೂ ಏಕಾಏಕಿ ಸಚಿವರು ಹೋಗುತ್ತಿರುವುದು ನಾನಾ ಅನುಮಾನಗಳನ್ನು ಹುಟ್ಟು ಹಾಕಿದೆ. ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ವಾಪಾಸ್ಸಾಗುತ್ತಿದ್ದು, ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಲಿದ್ದಾರೆ.

ಸಂಪುಟ ಪುನಾರಚನೆಗೆ ಅನುಮತಿ ನೀಡುವುದು ವಿಳಂಬವಾಗುವುದಾದಲ್ಲಿ ಕಳೆದ ಬಾರಿಯಂತೆ ಕೇವಲ ವಿಸ್ತರಣೆ ಮಾಡಲು ಅನುಮತಿ ಕೋರುವುದು. ಕಾಂಗ್ರೆಸ್‍ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿರುವ ಮೂವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮತ್ತು ಮತ್ತಿಬ್ಬರನ್ನು ಹೈಕಮಾಂಡ್ ಸೂಚಿಸಿದವರಿಗೆ ಸಚಿವ ಸ್ಥಾನ ನೀಡಿ ಎರಡು ಸ್ಥಾನ ಖಾಲಿ ಇರಿಸಿಕೊಳ್ಳುವುದು ಹಾಗೂ ಶುಕ್ರವಾರ ನೂತನ ಸಚಿವರ ಪ್ರಮಾಣ ವಚನಕ್ಕೆ ಅನುಮತಿ ನೀಡಿಬೇಕೆಂಬ ವಿಚಾರಗಳ ಕುರಿತು ಸಿಎಂ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸಿಎಂ ಮನವಿಗೆ ಹೈಕಮಾಂಡ್ ಸ್ಪಂಸಿದಲ್ಲಿ ಶುಕ್ರವಾರವೇ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ ಸಚಿವರಾಗಲಿದ್ದಾರೆ. ಇನ್ನಿಬ್ಬರು ಯಾರು ಎನ್ನುವುದು ನಿಗೂಢವಾಗಿದೆ. ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಬಲ ಆಕಾಂಕ್ಷಿಗಳಿದ್ದು, ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.

ಇದೆಲ್ಲವೂ ಇಂದು ಸಂಜೆ ಸಿಎಂ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ನಡೆಸಲಿರುವ ಮಾತುಕತೆ ಮೇಲೆ ನಿರ್ಧಾರವಾಗಲಿದೆ. ಈ ಬೆಳವಣಿಗೆಗಳ ನಡುವೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈಗ ಜಲಸಂಪನ್ಮೂಲ ಸಚಿವ ರಮೇಶ್ ಜÁರಕಿಹೊಳಿ ಅವರನ್ನು ಕರೆಸಿಕೊಂಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಜೆ.ಪಿ.ನಡ್ಡಾ ಅವರ ಸೂಚನೆಯಂತೆ ನಿನ್ನೆ ರಾತ್ರಿಯೇ ದೆಹಲಿಗೆ ತೆರಳಿರುವ ಸಚಿವ ರಮೇಶ ಜಾರಕಿಹೊಳಿ ಇಂದು ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದು, ಬಳಿಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

ಯಡಿಯೂರಪ್ಪ ಅವರ ಭೇಟಿಗೆ ಸಮಯಾವಕಾಶ ನೀಡಲು ಸತಾಯಿಸಿದ ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿ ಅವರನ್ನು ಕರೆಸಿಕೊಂಡು ಮಾತನಾಡುತ್ತಿರುವುದು ಸಹಜವಾಗಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಕುತೂಹಲ ಸೃಷ್ಟಿಸಿದೆ. ಇದಲ್ಲದೆ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಿ ಸರ್ಕಾರ ನಡೆಸುವ ಉಮೇದಿನಲ್ಲಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶೀಘ್ರದಲ್ಲೇ ತಮ್ಮ ಸರ್ಕಾರ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜಕಾರಣಿಗಳೊಂದಿಗೆ ನಿಕಟಸಂಪರ್ಕ ಹೊಂದಿರುವ ರಮೇಶ್ ಜಾರಕಿಹೊಳಿ ಅವರನ್ನು ಕರೆಸಿಕೊಂಡಿರಬಹುದೇ? ಎಂಬ ಅನುಮಾನವೂ ಹುಟ್ಟಿದೆ. ರಮೇಶ್ ಜಾರಕಿಹೊಳಿ ಅವರ ಆಪ್ತ ವಲಯದ ಪ್ರಕಾರ, ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲದ ತಯಾರಿ ಶುರುವಾಗಿದೆ. ಅದರಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಈ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಉಸ್ತುವಾರಿ ಆಗಿರುವ ರಾಜ್ಯದವರೇ ಆದ ಸಿ.ಟಿ. ರವಿ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿರುವ ರಮೇಶ್ ಜಾರಕಿಹೊಳಿ, ಹೈಕಮಾಂಡ್ ನಾಯಕರಿಂದ ಕರೆ ಬಂದಿದೆ. ಹಾಗಾಗಿ ದೆಹಲಿಗೆ ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ತರುವ ಸಂದರ್ಭದಲ್ಲಿ ಜೊತೆಗಿದ್ದ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನಿಸಿರುವ ಬಗ್ಗೆ ಒಪ್ಪಿಕೊಂಡಿರುವ ರಮೇಶ್ ಜಾರಕಿಹೊಳಿ ಹೈಕಮಾಂಡ್ ನಾಯಕರ ಜೊತೆ ಆ ವಿಷಯವನ್ನೂ ಪ್ರಸ್ತಾಪಿಸುವ ಸಾಧ್ಯತೆ ಇದೆ.SHARE THIS

Author:

0 التعليقات: