Saturday, 21 November 2020

ಪತ್ನಿಯ ಹೊಟ್ಟೆಯಲ್ಲೇ ಭ್ರೂಣ ಕೊಂದ! ಗಂಡನ ಪೈಶಾಚಿಕ ಕೃತ್ಯಕ್ಕೆ ಆಕೆಯೂ ಬಲಿ.


 ಪತ್ನಿಯ ಹೊಟ್ಟೆಯಲ್ಲೇ ಭ್ರೂಣ ಕೊಂದ! ಗಂಡನ ಪೈಶಾಚಿಕ ಕೃತ್ಯಕ್ಕೆ ಆಕೆಯೂ ಬಲಿ. 

ಚಿಕ್ಕಬಳ್ಳಾಪುರ: ಪತ್ನಿಯ ಹೊಟ್ಟೆಯಲ್ಲಿರುವ ಭ್ರೂಣ ಹೆಣ್ಣು ಎಂಬ ಕಾರಣಕ್ಕೆ ಗಂಡನೇ ಮುಂದೆ ನಿಂತು ಬಲವಂತವಾಗಿ ಮನೆಯಲ್ಲೇ ಅಬಾರ್ಷನ್ ಮಾಡಿಸಿದ್ದು, ಮಗುವಿನ ಜತೆಗೆ ತಾಯಿಯೂ ಮೃತಪಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಇಂತಹ ಅಮಾನವೀಯ ಘಟನೆ ಬಾಗೇಪಲ್ಲಿ ತಾಲೂಕಿನ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ. ಕೊತ್ತಪಲ್ಲಿ ಗ್ರಾಮದ ಸೋಮಶೇಖರ್​ ಎಂಬುವರ ಪತ್ನಿ ಪಿ.ಎಸ್​.ಶ್ರೀಕನ್ಯಾ ಮೃತ ದುರ್ದೈವಿ.

2014ರಲ್ಲಿ ಸೋಮಶೇಖರ್​ ಜತೆ ಶ್ರೀಕನ್ಯಾರ ಮದುವೆ ಆಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಪತಿಯ ಕುಟುಂಬದವರು ಗಂಡು ಮಗು ಬೇಕು ಎಂದ ಕಾರಣಕ್ಕೆ 3ನೇ ಮಗು ಪಡೆಯಲು ದಂಪತಿ ನಿರ್ಧರಿಸಿದ್ದರು. ಶ್ರೀಕನ್ಯಾ ಗರ್ಭಿಣಿಯಾದಾಗ ಪತಿ ಕುಟುಂಬಸ್ಥರು ಭ್ರೂಣದ ಲಿಂಗ ಪರೀಕ್ಷೆ ಮಾಡಿಸಿದ್ದು, ಅದು ಹೆಣ್ಣು ಭ್ರೂಣ ಎಂದು ತಿಳಿದಿದೆ. ಹಾಗಾಗಿ ಪತಿ ಹಾಗೂ ಕುಟುಂಬಸ್ಥರು ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹಾಕಿದ್ದರು.

ಗರ್ಭಪಾತ ಮಾಡಿಸಿಕೊಳ್ಳಲು ಶ್ರೀಕನ್ಯಾ ಒಪ್ಪಿರಲಿಲ್ಲ. ಶ್ರೀಕನ್ಯಾರ ತವರು ಮನೆಯವರೂ ಗರ್ಭಪಾತ ಮಾಡಿಸದಂತೆ ಸೋಮಶೇಖರ್​ ಮನೆಯವರಿಗೆ ಬುದ್ಧಿ ಹೇಳಿದ್ದರು.

ಅಷ್ಟಾದರೂ ನ.16ರಂದು ಮನೆಯಲ್ಲೇ ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು ಎನ್ನಲಾಗಿದೆ. ಈ ವೇಳೆ ಶ್ರೀಕನ್ಯಾಗೆ ತೀವ್ರ ರಕ್ತಸ್ರಾವವಾಗಿದ್ದರಿಂದ ಪಟ್ಟಣದ ಖಾಸಗಿ ಕ್ಲಿನಿಕ್​ಗೆ ದಾಖಲಿಸಲಾಗಿತ್ತು. ವೈದ್ಯರ ಸೂಚನೆ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಿಸಲದೆ ನ.19ರಂದು(ಗುರುವಾರ) ಮೃತಪಟ್ಟರು.

ಬಲವಂತವಾಗಿ ಗರ್ಭಪಾತ ಮಾಡಿಸಿದ ಹಿನ್ನೆಲೆಯಲ್ಲಿ ಮಗಳು ಮೃತಪಟ್ಟಿದ್ದಾಳೆ ಎಂದು ಮೃತಳ ತಂದೆ ಶ್ರೀನಿವಾಸ್​ ಬಾಗೇಪಲ್ಲಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಆರ್​ಎಂಪಿ ಡಾಕ್ಟರ್ ಇಬ್ರಾಹಿಂ ಖಾನ್ ಮತ್ತು ನರ್ಸ್ ಜಬೀಜಾ, ಶ್ರೀಕನ್ಯರ ಪತಿ ಸೋಮಶೇಖರ್​ನನ್ನು ಬಂಧಿಸಿದ್ದಾರೆ.

ಸೋಮಶೇಖರ್ ಮನೆಯಲ್ಲೇ ಶೀಕನ್ಯಗೆ ವೈದ್ಯ ಇಬ್ರಾಹಿಂ ಖಾನ್ ಅಬಾರ್ಷನ್ ಮಾಡಿದ್ದರು. ಈ ಕೆಲಸಕ್ಕೆ ನರ್ಸ್​ ಜಬೀಜಾ ಸಾಥ್​ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಡಾಕ್ಟರ್​ ಗೌರಿಬಿದನೂರು ತಾಲೂಕಿನ ಡಿ.ಪಾಳ್ಯದವರು ಎಂದು ತಿಳಿದು ಬಂದಿದೆ.


SHARE THIS

Author:

0 التعليقات: