Thursday, 12 November 2020

ಆರ್​ಆರ್​ ನಗರ, ಶಿರಾ ನಂತರ ಎಲ್ಲರ ಗಮನ ಈಗ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯತ್ತ!


 ಆರ್​ಆರ್​ ನಗರ, ಶಿರಾ ನಂತರ ಎಲ್ಲರ ಗಮನ ಈಗ   ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯತ್ತ!


ಬೀದರ್; ಕುತೂಹಲ ಹುಟ್ಟಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಈಗ ಬಿ.ನಾರಾಯಣರಾವ್ ನಿಧನದಿಂದ ತೆರವಾಗಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಮೇಲೆ ಮೂರು ಪಕ್ಷಗಳು ಗಮನ ಕೇಂದ್ರೀಕರಿಸಿದ್ದು, ಉಪಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿವೆ. ಕಾಂಗ್ರೆಸ್ ಶತಾಯಗತಾಯ ಕ್ಷೇತ್ರ ಉಳಿಸಿಕೊಳ್ಳುವ ಉಮೇದಿಯಲ್ಲಿದ್ದರೆ, ಬಿಜೆಪಿ ನಾಗಾಲೋಟ ಮುಂದುವರೆಸುವ ತವಕದಲ್ಲಿದೆ. ಇನ್ನು ಜೆಡಿಎಸ್ ಮಾತ್ರ ಕಳೆದು ಹೋಗಿರುವ ವರ್ಚಸ್ಸನ್ನು ಮರಳಿ ಪಡೆಯಲು ಯತ್ನಿಸುತ್ತಿದೆ.


ಬಿ.ನಾರಾಯಣರಾವ್ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರಕ್ಕೆ ಇನ್ನೇನು ಉಪ ಚುನಾವಣೆ ಘೋಷಣೆಯಾಗುವ ಹಂತದಲ್ಲಿದೆ. ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾದರೂ ಹೈ ಕಮಾಂಡ್ ಸಮಿತಿಯೊಂದನ್ನು ರಚಿಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಅದರಲ್ಲಿ ಬೀದರ್ ಜಿಲ್ಲೆಯ ಎಲ್ಲ ಚುನಾಯಿತ ಕಾಂಗ್ರೆಸ್ ನಾಯಕರನ್ನು ಸದಸ್ಯರನ್ನಾಗಿಸಲಾಗಿದೆ. ದಿವಂಗತ ಶಾಸಕ ಬಿ.ನಾರಾಯಣರಾವ್ ಕುಟುಂಬಸ್ಥರು ಸಹ ಟಿಕೆಟ್ ಕೇಳಿರುವುದನ್ನು ಜಿಲ್ಲೆಯ ಕಾಂಗ್ರೆಸ್ ಮುಖಂಡರೇ ಖಚಿತಪಡಿಸಿದ್ದಾರೆ. ಕ್ಷೇತ್ರದ ಬಹುಪಾಲು ಕಾಂಗ್ರೆಸ್ ಕಾರ್ಯಕರ್ತರು ಸಹ ಈಗಾಗಲೇ ನಾರಾಯಣರಾವ್ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಾಸೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಬಸವ ಕಲ್ಯಾಣ ಉಪ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಮಾಡಿರುವ ಸಮಿತಿ ನಿರ್ಣಯವೇ ಅಂತಿಮ ಎನ್ನಲಾಗಿದ್ದು, ನಾಳೆ ಕಾಂಗ್ರೆಸ್ ಆಕಾಂಕ್ಷಿಗಳ ಸಭೆ ಸಹ ಬಸವಕಲ್ಯಾಣದಲ್ಲಿ ನಡೆಯಲಿದೆ. ಬಸವಕಲ್ಯಾಣದಲ್ಲಿ 55,000 ಲಿಂಗಾಯತ, 49,000 ಮುಸ್ಲಿಂ, 40,000 ಮರಾಠ, 26,000 ಕೋಲಿ, 15,000 ಕುರುಬ ಮತ್ತು ಸುಮಾರು 45,000 ಎಸ್ಸಿ ಮತದಾರರಿದ್ದಾರೆ. ಸಿದ್ದರಾಮಯ್ಯ ಆಪ್ತ ಬಣದಲ್ಲೂ ಗುರುತಿಸಿಕೊಂಡಿದ್ದ ನಾರಾಯಣರಾವ್ ಅವರು ಅಹಿಂದ ವರ್ಗದ ನಾಯಕರಾಗಿದ್ದವರು. ನಾರಾಯಣರಾವ್ ಅವರ ಕುಟುಂಬಸ್ಥರಿಗೆ ತಪ್ಪಿದರೆ, ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿದರೆ ಅನುಕಂಪದ ಜೊತೆಗೆ ಕಾಂಗ್ರೆಸ್ ಗೆಲುವಿಗೆ ಇದು ಸಹಕಾರಿಯಾಗಲಿದೆ ಎಂಬುದು ಕೈ ಮುಖಂಡರ ಲೆಕ್ಕಾಚಾರ.


ಸಿಎಂ ಬಿಎಸ್ ವೈ ಪುತ್ರ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳಿಂದ ಬಸವಕಲ್ಯಾಣದ ಕಡೆ ಬಿಜೆಪಿ ನಾಯಕರು ಹೊರಳಿ ನೋಡುವಂತಾಗಿತ್ತು. ಆದರೆ, ಖುದ್ದು ಈ ಮಾತನ್ನು ವಿಜಯೇಂದ್ರ ಅಲ್ಲಗಳೆದಿದ್ದರು. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಒಮ್ಮೆ ಜೆಡಿಎಸ್ ನಿಂದ ಮತ್ತೊಮ್ಮೆ ಬಿಜೆಪಿಯಿಂದ ಶಾಸಕರಾಗಿರುವ ಖೂಬಾ ಅವರು ಕಳೆದ ವಿಧಾನಸಭೆಯಲ್ಲಿ ಜೆಡಿಎಸ್ ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇನ್ನು ಮಾಜಿ ಶಾಸಕ ಖೂಬಾ ಸದಾ ದೆಹಲಿಯಲ್ಲೇ ಇರುತ್ತಾರೆ. ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡು ಬರುವುದಿಲ್ಲ ಎಂಬ ಅಸಮಾಧಾನ ಕ್ಷೇತ್ರದ ಜನರಲ್ಲಿದೆ. ಒಂದು ವೇಳೆ ಬಿಜೆಪಿ ಟಿಕೆಟ್ ಸಿಗದೆ ಹೋದರೆ ಬಿಜೆಪಿಯ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮತ್ತೆ ಮಾತೃ ಪಕ್ಷ ಜೆಡಿಎಸ್ ಕದ ಬಡಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೂಡ ಈಗಾಗಲೇ ಬಸವಕಲ್ಯಾಣ ಕ್ಷೇತ್ರದಾದ್ಯಂತ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿವೆ.


ಇನ್ನುಳಿದಂತೆ ಬಿಜೆಪಿಯಿಂದ ಟಿಕೆಟ್ ರೇಸ್ ನಲ್ಲಿ ಶರಣು ಸಲಗರ ಅವರ ಹೆಸರು ಕೂಡ ಮುನ್ನೆಲೆಯಲ್ಲಿದ್ದು, ಸಂಘ ಪರಿವಾರದ ಹಿರಿಯರ ಜೊತೆಗೆ ಅವರಿಗಿರುವ ಆಪ್ತ ಒಡನಾಟ ಪ್ಲಸ್ ಪಾಯಿಂಟ್ ಎನ್ನಲಾಗುತ್ತಿದೆ‌. ಇನ್ನು ಕೊರೋನಾ ಸಮಯದಲ್ಲಿ ಜನರ ಸಂಕಷ್ಟಕ್ಕೆ ನೆರವಾಗಿದ್ದ ಶರಣು ಸಲಗರ ಅವರಿಗೆ ತಾಲೂಕಿನಾದ್ಯಂತ ಅಭಿಮಾನಿಗಳಿದ್ದಾರೆ. ಹಾಗಾಗಿ ಸಲಗರ ಅವರಿಗೆ ಬಿಜೆಪಿ ನಾಯಕರು ಮಣೆ ಹಾಕಿದರೂ ಅಚ್ಚರಿಪಡಬೇಕಿಲ್ಲ ಎನ್ನುತ್ತವೆ ಬಿಜೆಪಿ ಮೂಲಗಳು.

ಇನ್ನು ಬಸವಕಲ್ಯಾಣ ಕ್ಷೇತ್ರದಲ್ಲಿ ಒಂದು ಕಾಲಕ್ಕೆ ಜೆಡಿಎಸ್ ನದ್ದೇ ಪಾರುಪತ್ಯವಿತ್ತು. ಕಾಲಾ ನಂತರದಲ್ಲಿ ಸದ್ಯ ಜೆಡಿಎಸ್ ಬಸವ ಕಲ್ಯಾಣ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಸ್ಪರ್ಧಿಸಿದ ಕಾರಣಕ್ಕಷ್ಟೇ ಜೆಡಿಎಸ್ ಗಮನಾರ್ಹ ಎನ್ನುವಷ್ಟು ಮತ ಗಳಿಸಿತ್ತು. ಅದರ ಹೊರತಾಗಿ ಈ ಕ್ಷೇತ್ರದಲ್ಲಿ ಅಷ್ಟು ಸಕ್ರಿಯವಾಗಿರದ ನಾಯಕರು ಜೆಡಿಎಸ್ ನಲ್ಲಿಲ್ಲ. ಹಾಗಾಗಿ ಬಸವ ಕಲ್ಯಾಣ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಒಂದು ವೇಳೆ ಬಿಜೆಪಿ ಟಿಕೆಟ್ ಸಿಗದೆ ಮಲ್ಲಿಕಾರ್ಜುನ ಖೂಬಾ ಜೆಡಿಎಸ್ ಹೋದರಷ್ಟೇ ಜೆಡಿಎಸ್ ಪರಿಣಾಮಕಾರಿ ಎನಿಸಿಕೊಳ್ಳಬಹುದಷ್ಟೇ. ಇನ್ನು ಕೆಲವೇ ದಿನಗಳಲ್ಲಿ ಉಪ ಚುನಾವಣೆ ಘೋಷಣೆಯಾಗಲಿದ್ದು, ಎಲ್ಲ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಹಾಗೂ ಪಕ್ಷಗಳ ನಡೆ ಕುತೂಹಲ ಹುಟ್ಟಿಸಿರುವುದಂತೂ ನಿಜ.


SHARE THIS

Author:

0 التعليقات: