ಇಡೀ ಗ್ರಾಮಕ್ಕೆ ಹರಡಿದ ಕೊರೊನಾ ವೈರಸ್, ಇಲ್ಲಿ ಒಬ್ಬ ಬಿಟ್ಟು ಉಳಿದವರೆಲ್ಲಾ ಸೋಂಕಿತರೇ..!
ಧರ್ಮಶಾಲಾ: ಗ್ರಾಮವೊಂದರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಅಂದ್ರು ಇಡೀ ಊರಿನ ಜನರೇ ಭಯ ಭೀತರಾಗ್ತಾರೆ. ಅಂತದ್ರಲ್ಲಿ ಇಡೀ ಊರಿಗೆ ಊರೇ ಮಾರಕ ವೈರಸ್ʼಗೆ ತುತ್ತಾಗಿದೆ ಅಂದ್ರೆ ಹೇಗಿರ್ಬೇಡ ಹೇಳಿ. ಹೌದು, ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯ ಸಣ್ಣ ಗ್ರಾಮವೊಂದರಲ್ಲಿ ಅದೃಷ್ಟವಶಾತ್ ಒಬ್ಬ ವ್ಯಕ್ತಿಗೆ ಬಿಟ್ಟು, ಉಳಿದವರಿಗೆಲ್ಲಾ ಸೋಂಕು ತಗುಲಿದೆ.
ಮನಾಲಿ-ಲೇಹ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ತೊರಂಗ್ ಗ್ರಾಮದಲ್ಲಿ 42 ಜನರಿದ್ದಾರೆ. ಇಲ್ಲಿನ ಜನರಿಗೆ ಕೋವಿಡ್ 19 ಟೆಸ್ಟ್ ಮಾಡಿಸಿದಾಗ ಬರೋಬ್ಬರಿ 41 ಮಂದಿಯ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಅದೃಷ್ಟವಶಾತ್ 52 ವರ್ಷದ ಭೂಷಣ್ ಠಾಕೂರ್ ಎನ್ನುವ ವ್ಯಕ್ತಿಯ ರಿಪೋರ್ಟ್ ಮಾತ್ರ ನೆಗೆಟಿವ್ ಆಗಿದೆ. ಅಂದ್ಹಾಗೆ, ಈ ಜನ ಚಳಿಗಾಲವಾದ ಕಾರಣ ಕುಲುವಿನಿಂದ ವಲಸೆ ಬಂದವರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಠಾಕೂರ್, 'ಎಲ್ಲರಿಗೂ ಅನಾರೋಗ್ಯ ಬಂದ ಕಾರಣ ಕಳೆದ ನಾಲ್ಕಾರು ದಿನಗಳಿಂದ ನಾನೊಬ್ಬ ಪ್ರತ್ಯೇಕವಾಗಿದ್ದೇನೆ. ಕರೊನಾ ಸೋಂಕು ತಡೆಯುವುದಕ್ಕೆ ಅಗತ್ಯ ಮುಂಜಾಗ್ರತಾ ಕ್ರಮವನ್ನು ಎಲ್ಲರೂ ತೆಗೆದುಕೊಂಡಿದ್ದೇವೆ. ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಎಲ್ಲವನ್ನೂ ಮಾಡುತ್ತಿದ್ದೇವೆ. ಈ ರೋಗವನ್ನು ಯಾರೂ ಲಘುವಾಗಿ ಪರಿಗಣಿಸಬಾರದು' ಎಂದರು.
ಲಾಹೌಲ್ ಸ್ಪಿಟಿ ಜಿಲ್ಲೆಯಲ್ಲಿ 30,000ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಅವರ ಪೈಕಿ ಬಹುತೇಕರು ವಲಸೆ ಹೋಗಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 856 ಜನ ಸೋಂಕು ಪೀಡಿತರಾಗಿದ್ದಾರೆ. ಹಾಗಾಗಿ ಇಲ್ಲಿ ಬಹುತೇಕ ಚಟುವಟಿಕೆಗಳು ನಿರ್ಬಂಧಿಸಲ್ಪಟ್ಟಿವೆ.
0 التعليقات: