Friday, 13 November 2020

'ಹಸಿರು ಪಟಾಕಿ'ಗಳನ್ನಷ್ಟೇ ಮಾರಾಟಕ್ಕೆ ಅವಕಾಶ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ


 'ಹಸಿರು ಪಟಾಕಿ'ಗಳನ್ನಷ್ಟೇ ಮಾರಾಟಕ್ಕೆ ಅವಕಾಶ: ನಿಯಮ       ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ

ಬೆಂಗಳೂರು, ನ. 13: ಮಾರಕ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಾರ್ವಜನಿಕರು ಹಚ್ಚಲು ಅನುಮತಿಸಿದೆ. ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಈ ಸಂಬಂಧ ಆದೇಶ ಹೊರಡಿಸಿರುವ ಅವರು, ರಾಜ್ಯದ ಎಲ್ಲ ನಗರ ಪಾಲಿಕೆಗಳು ಮತ್ತು ಪೊಲೀಸ್ ಇಲಾಖೆಯು ಸಂಬಂಧಪಟ್ಟ ಪ್ರಾಧಿಕಾರಗಳು, ಸರಕಾರದ ನ.6, ನ.10 ಮತ್ತು ನ.11ರ ಆದೇಶವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು, ಪಟಾಕಿ ಮಾರಾಟಗಾರರ ಅಂಗಡಿಗಳಿಗೆ ಭೇಟಿ ನೀಡಿ ಸಿಎಸ್‍ಐಆರ್ ಮತ್ತು ಎನ್‍ಇಇಆರ್‍ಐ ಪ್ರಮಾಣಿಕೃತ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳತಕ್ಕದ್ದು.

ಹಸಿರು ಪಟಾಕಿಗಳು ಎಂದರೆ ಏನೆಂಬುದರ ಬಗ್ಗೆ ಸಾರ್ವಜನಿಕರಿಗೆ ಮನದಟ್ಟು ಮಾಡಲು ಮತ್ತು ಖರೀದಿಗೆ ಗಮನಹರಿಸಲು ವಿವರಣೆಗಳನ್ನು ಹೊರಡಿಸಲಾಗಿದೆ. ಈ ವಿವರಣೆಗಳಲ್ಲಿ ಹಸಿರು ಪಟಾಕಿಗಳಲ್ಲಿನ ಖರೀದಿಗೆ ಗಮನಿಸಬೇಕಾದ ಚಿಹ್ನೆ, ರಾಷ್ಟ್ರೀಯ ಪ್ರಮಾಣ ಪತ್ರ ಮತ್ತು ರಾಸಾಯನಿಕ ಬಳಕೆಗಳ ಬಗ್ಗೆ ತಿಳಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಆದೇಶದಲ್ಲಿ ವಿವರಣೆ ನೀಡಿದ್ದಾರೆ.

ಹಸಿರು ಪಟಾಕಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಶಬ್ದ ಮಾಲಿನ್ಯವನ್ನು ತಡೆಗಟ್ಟಲು ಮತ್ತು ಯಾವುದೇ ಕಾರಣಕ್ಕೂ ನಿಯಮ ವ್ಯಾಪ್ತಿ ಮೀರಿ ಪಟಾಕಿಗಳ ಶಬ್ದ ಹೆಚ್ಚಾಗಿ ಹೊಮ್ಮದಂತೆ ಕ್ರಮ ವಹಿಸಬೇಕು. ಒಂದು ವೇಳೆ ಈ ನಿಯಮ ಉಲ್ಲಂಘಿಸುವವರ ಬಗ್ಗೆ ಸಹಾನುಭೂತಿ ತೋರತಕ್ಕದ್ದಲ್ಲ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನ.11ರ ಆದೇಶವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.


SHARE THIS

Author:

0 التعليقات: