Thursday, 19 November 2020

60 ಲಕ್ಷ ನೇರ-ಪರೋಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ; ಸಿಎಂ ಯಡಿಯೂರಪ್ಪ ಭರವಸೆಯ ಮಾತು

 

60 ಲಕ್ಷ ನೇರ-ಪರೋಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ; ಸಿಎಂ           ಯಡಿಯೂರಪ್ಪ ಭರವಸೆಯ ಮಾತು


ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬೆಂಗಳೂರಿನಾಚೆ ವಿಸ್ತರಿಸುವ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನದ ಕಾರ್ಯನೀತಿಯನ್ನು ಜಾರಿಗೊಳಿಸಿದ್ದು, ಮುಂದಿನ 5 ವರ್ಷಗಳಲ್ಲಿ 60 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಹೇಳಿದರು.

ವರ್ಚುಯಲ್ ವೇದಿಕೆಯಲ್ಲಿ 3 ದಿನಗಳ ಕಾಲ ನಡೆಯಲಿರುವ 'ಬೆಂಗಳೂರು ತಾಂತ್ರಿಕ ಶೃಂಗ (ಬಿಟಿಎಸ್ 2020) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉದ್ಯಮಿಸ್ನೇಹಿ ವಾತಾವರಣ ನಿರ್ವಿುಸಲು ಅನೇಕ ಉಪಕ್ರಮಗಳು, ಬದಲಾವಣೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಕೈಗಾರಿಕಾ ವಿವಾದ, ಕೈಗಾರಿಕೆ ಸೌಲಭ್ಯಗಳು, ಭೂಸುಧಾರಣೆ, ಕಾರ್ವಿುಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಉದ್ಯಮ, ಹೂಡಿಕೆಗೆ ಉತ್ತೇಜನ ನೀಡಿದೆ. ಮಾಹಿತಿ, ತಂತ್ರಜ್ಞಾನ ಕ್ಷೇತ್ರ, ನವೋದ್ಯಮಗಳ ವಲಯದಲ್ಲಿ ಬೆಂಗಳೂರಿನ ಸಾಧನೆ ದೇಶವಷ್ಟೇ ಅಲ್ಲ, ವಿಶ್ವದ ಗಮನಸೆಳೆದಿದೆ ಎಂದರು.

ಆರ್ಥಿಕತೆ ಗುರಿ: ಮುಂದಿನ 5 ವರ್ಷಗಳೊಳಗೆ ಜೈವಿಕ ಆರ್ಥಿಕತೆಯನ್ನು 100 ಶತ ಕೋಟಿ ಡಾಲರ್​ಗೆ ತಲುಪಿಸುವ ಗುರಿ ಇಟ್ಟುಕೊಂಡು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದೇಶದ ಒಟ್ಟು ವಹಿವಾಟಿನಲ್ಲಿ ರಾಜ್ಯದ ಪಾಲು ಶೇ.5 ಇರಬೇಕು ಎಂಬುದು ಸರ್ಕಾರದ ಸಂಕಲ್ಪವಾಗಿದೆ. ಐಟಿ-ಬಿಟಿ ಉದ್ಯಮದ ಬೆಳವಣಿಗೆಗೆ ಪೂರಕ ಕಾರ್ಯನೀತಿ, ಹಲವು ವಿನಾಯಿತಿಗಳನ್ನು ನೀಡಿ ಪ್ರೋತ್ಸಾಹಿಸಲಾಗಿದೆ. ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ ಮುಂತಾದ 2ನೇ ಹಂತದ ನಗರಗಳಲ್ಲೂ ಈ ಉದ್ಯಮ ಬೆಳೆದು, ಜನರ ಜೀವನಮಟ್ಟ ಸುಧಾರಣೆಗೆ ನೆರವಾಗಲೆಂದು ಸರ್ಕಾರ ಒತ್ತು ನೀಡಿದೆ ಎಂದು ಬಿಎಸ್​ವೈ ಸಮರ್ಥಿಸಿಕೊಂಡರು.

ಪ್ರಧಾನಿ ಮೋದಿಯವರ ದೂರದರ್ಶಿತ್ವ ಕ್ರಮಗಳಿಂದಾಗಿ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ನಿರೀಕ್ಷಿತ ಫಲಗಳನ್ನು ನೀಡುತ್ತಿವೆ. ಡಿಜಿಟಲ್ ಕ್ರಾಂತಿಯು ಸರ್ಕಾರದ ಕಾರ್ಯಕ್ಷಮತೆ ಹೆಚ್ಚಿಸಿ, ಅರ್ಹ ಫಲಾನುಭವಿಗಳಿಗೆ ಅನುಕೂಲತೆ ಕಲ್ಪಿಸಿದೆ ಎಂದರು.

'ಆತ್ಮನಿರ್ಭರ್ ಭಾರತ'ಕ್ಕೆ ಒತ್ತು: ಮೋದಿಯವರ ಅತ್ಯಾಸಕ್ತಿಯ 'ಆತ್ಮನಿರ್ಭರ್ ಭಾರತ'ಕ್ಕೂ ರಾಜ್ಯ ಒತ್ತು ನೀಡಿದೆ. ಸ್ಥಳೀಯ ಸಂಪನ್ಮೂಲ, ಪ್ರತಿಭೆಗಳ ಪರಿಣಾಮಕಾರಿ ಬಳಕೆ, ಕೌಶಲಪೂರ್ಣ ಮಾನವ ಸಂಪನ್ಮೂಲ ವೃದ್ಧಿ, ತಾಂತ್ರಿಕತೆ ಪರಿಣತಿ ಸಹಿತ ಹಲವು ಕ್ರಮಗಳು ಜಾರಿಯಾಗಿವೆ ಎಂದು ಸಿಎಂ ವಿವರಿಸಿದರು.

ಐತಿಹಾಸಿಕ ತಂತ್ರಜ್ಞಾನ ಮೇಳದಲ್ಲಿ 25ಕ್ಕೂ ಹೆಚ್ಚು ರಾಷ್ಟ್ರಗಳು, ಪ್ರಮುಖ ಉದ್ಯಮಿಗಳು, ಖ್ಯಾತ ಪರಿಣತರು, ನವೋದ್ಯಮಿಗಳು, ಹೂಡಿಕೆದಾರರು ಭಾಗವಹಿಸಿ, ಜನ ಸ್ನೇಹಿ ತಂತ್ರಜ್ಞಾನವಾಗಿಸಲು ಒತ್ತಾಸೆಯಾಗಿರುವುದು ಸಂತಸ ತಂದಿದೆ ಎಂದು ಬಿಎಸ್​ವೈ ಹೇಳಿದರು.

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸ್, ಸ್ವೀಡನ್ ಉಪ ರಾಷ್ಟ್ರಾಧ್ಯಕ್ಷ ಗಯ್ ಪರ್ವಿುಲಿನ್, ಮಾಹಿತಿ ತಂತ್ರಜ್ಞಾನ ದೂರದರ್ಶಿತ್ವ ಸಮಿತಿಯ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ಭಾಸ್ಕರ್, ಶಾಸಕ ರಿಜ್ವಾನ್ ಅರ್ಷದ್, ಐಟಿ-ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ್, ನವೋದ್ಯಮ ದೂರದರ್ಶಿತ್ವ ಸಮಿತಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಎಸ್​ಟಿಪಿಐ ಮುಖ್ಯಸ್ಥ ಶೈಲೇಂದ್ರಕುಮಾರ್ ಇದ್ದರು.

ಬೆಂಗಳೂರು ಈಗ ಟೆಕ್ನಾಲಜಿ ಹಬ್ ಆಗಿದೆ, ಜಗತ್ತು ತಂತ್ರಜ್ಞಾನವೆಂಬ ನೂಲಿನ ಮೇಲೆ ನಡೆಯುತ್ತಿದ್ದು, ಮಳೆ, ಬೆಳೆ ಹೀಗೆ ಎಲ್ಲವನ್ನು ತಂತ್ರಜ್ಞಾನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಡಿಜಿಟಲ್ ಎಕಾನಮಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಬಂಡವಾಳ ಹೂಡಿಕೆ ಅಗಾಧವಾಗಿ ವೃದ್ಧಿಸುತ್ತಿದೆ.


SHARE THIS

Author:

0 التعليقات: