Sunday, 22 November 2020

ಮಂಡ್ಯ: ದಾಖಲೆಗಾಗಿ ಎತ್ತಿನಗಾಡಿಗೆ 15 ಟನ್‌ ಕಬ್ಬು ತುಂಬಿದರು!


ಮಂಡ್ಯ: ದಾಖಲೆಗಾಗಿ ಎತ್ತಿನಗಾಡಿಗೆ 15 ಟನ್‌ ಕಬ್ಬು ತುಂಬಿದರು!


ಮಂಡ್ಯ: ದಾಖಲೆ ನಿರ್ಮಿಸುವುದಕ್ಕಾಗಿ ತಾಲ್ಲೂಕಿನ ಎಚ್‌.ಮಲ್ಲಿಗೆರೆ ಗ್ರಾಮದ ಯುವಕರು ಭಾನುವಾರ ಎತ್ತಿನಗಾಡಿಗೆ 14.55 ಟನ್‌ ಕಬ್ಬು ತುಂಬಿ, ಜೋಡೆತ್ತುಗಳಿಂದ ಮೂರು ಕಿ.ಮೀ.ವರೆಗೆ ಎಳೆಸಿದ್ದಾರೆ. ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಗುರಿಯಾಗಿದೆ.

ಜಿಲ್ಲೆಯಲ್ಲಿ ರೈತರು ಆಲೆಮನೆ, ಸಕ್ಕರೆ ಕಾರ್ಖಾನೆಗಳಿಗೆ ಎತ್ತಿನಗಾಡಿ ಮೂಲಕ ಕಬ್ಬು ಸಾಗಿಸುವುದು ಸಾಮಾನ್ಯ. ಅದಕ್ಕಾಗಿ ರೈತರು ಟೈರ್‌ಗಾಡಿಗಳನ್ನು ವಿಶೇಷವಾಗಿ ವಿನ್ಯಾಸ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ 5-8 ಟನ್‌ ಕಬ್ಬು ತುಂಬಿ ಸಾಗಿಸುತ್ತಾರೆ. ಹೆಚ್ಚು ಕಬ್ಬು ತುಂಬಿ ಎಳೆಸುವ ಸ್ಪರ್ಧೆ ಯುವರೈತರಲ್ಲಿ ಇದೆ. ಈ ಹಿಂದೆ 12 ಟನ್‌ ಕಬ್ಬು ತುಂಬಿ ಎಳೆಸಿದ ದಾಖಲೆ ಇತ್ತು.

ಎಚ್‌.ಮಲ್ಲಿಗೆರೆ ವಿನಾಯಕ ಗೆಳೆಯರ ಬಳಗದ ಯುವಕರು ಭಾನುವಾರ ನಸುಕಿನಿಂದಲೇ 14.55 ಟನ್‌ ಕಬ್ಬು ತುಂಬಿದ್ದಾರೆ. ಗ್ರಾಮದ ಬೀದಿಯಲ್ಲಿ 3 ಕಿ.ಮೀ.ವರೆಗೆ ಎಳೆಸುವ ಮೂಲಕ ಹಳೆಯ ದಾಖಲೆ ಮುರಿದಿದ್ದಾರೆ. ಜೋಡೆತ್ತು ಹುರುಗಲವಾಡಿ ಗ್ರಾಮದ ಶರತ್‌ ಎಂಬುವವರಿಗೆ ಸೇರಿವೆ. ಅವರು ಈಚೆಗೆ ಎತ್ತುಗಳನ್ನು ₹ 2.90 ಲಕ್ಷಕ್ಕೆ ಖರೀದಿ ಮಾಡಿದ್ದರು.

ಗಾಡಿಯ ಹಿಂದೆ ಮುಂದೆ ಕಬ್ಬು ತುಂಬಿರುವುದನ್ನು ನೋಡಲು ರಸ್ತೆಯಲ್ಲಿ ಜನರು ಸಾಲುಗಟ್ಟಿ ನಿಂತಿದ್ದರು. ವೈಬ್ರಿಜ್‌ನಲ್ಲಿ ತೂಕ ಮಾಡಿದಾಗ 14.55 ಟನ್‌ ಕಬ್ಬು ತುಂಬಿರುವುದು ತಿಳಿದು ಬಂತು. ಗಾಡಿಗೆ ಟ್ರ್ಯಾಕ್ಟರ್‌ ಟೈರ್‌ ಹಾಗೂ ಆಯಕ್ಷಲ್‌ ಬ್ಲೇಡ್‌ ಬಳಸಿ ವಿನ್ಯಾಸ ಮಾಡಿಕೊಂಡಿದ್ದರು.

ಆಕ್ರೋಶ: ಎತ್ತುಗಳು ಏದುಸಿರು ಬಿಡುತ್ತಾ ಗಾಡಿ ಎಳೆಯುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದರು. ದಾಖಲೆ ನಿರ್ಮಿಸುವ ಚಟಕ್ಕೆ ಬಿದ್ದು ಯುವಕರು ಎತ್ತುಗಳಿಗೆ ಹಿಂಸೆ ನೀಡಿದ್ದಾರೆ, ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡುವಂತೆ ಒತ್ತಾಯಿಸಿದರು.'ಎಚ್‌.ಮಲ್ಲಿಗೆರೆ ಗ್ರಾಮದ ಹುಡುಗರು ಹಾಕಿದ್ದ ಸವಾಲು ಪೂರೈಸಲು 15 ಟನ್‌ ಕಬ್ಬು ತುಂಬಿದ್ದಾರೆ. ಗೆಳೆಯರಾಗಿದ್ದ ಕಾರಣ ಅವರಿಗೆ ನಾನು ಜೋಡೆತ್ತುಗಳನ್ನಷ್ಟೇ ಕೊಟ್ಟಿದ್ದೆ. ಗಾಡಿಯನ್ನು ಭಾರತೀನಗರದಿಂದ ತರಿಸಿದ್ದರಂತೆ' ಎಂದು ಜೋಡೆತ್ತು ಮಾಲೀಕ ಶರತ್‌ ಹೇಳಿದರು.


SHARE THIS

Author:

0 التعليقات: