Wednesday, 21 October 2020

ಆಗ್ನೇಯ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ: ಬಿಜೆಪಿಗೆ ಮಗ್ಗುಲ ಮುಳ್ಳಾಗಿರುವ ಬಂಡಾಯ ಅಭ್ಯರ್ಥಿಗಳು!

 

ಆಗ್ನೇಯ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ: ಬಿಜೆಪಿಗೆ ಮಗ್ಗುಲ ಮುಳ್ಳಾಗಿರುವ ಬಂಡಾಯ ಅಭ್ಯರ್ಥಿಗಳು!

ದಾವಣಗೆರೆ/ಚಿತ್ರದುರ್ಗ: ಚುನಾವಣಾ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪ್ರಚಾರದ ಭರಾಟೆ ಹೆಚ್ಚಿದೆ.

ಅಕ್ಟೋಬರ್ 28 ರಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿರುವುದರಿಂದ ಅಭ್ಯರ್ಥಿಗಳು ತಮ್ಮ ಅಂತಿಮ ಹಂತದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಮೂರು ಪ್ರಮುಖ ಪಕ್ಷಗಳ 15 ಅಭ್ಯರ್ಥಿಗಳು ಹಾಗೂ ಇಬ್ಬರು ಬಿಜೆಪಿ ಬಂಡಾಯ ಸ್ಪರ್ಧಿಗಳು ಕಣದಲ್ಲಿದ್ದಾರೆ.

ಕಾಂಗ್ರೆಸ್ ನ ರಮೇಶ್ ಬಾಬು ಮತ್ತು ಜೆಡಿಎಸ್ ನ ಚೌಡರೆಡ್ಡಿ ತೋಪಳ್ಳಿ ಅವರಿಗೆ ಪಕ್ಷದ ಬಂಡಾಯಗಾರರ ಕಾಟವಿಲ್ಲ. ಆಜದರೆ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ ಗೌಡ ಅವರಿಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತಿ ತೊಡಕಾಗಿದ್ದಾರೆ. ಅವರ ಜೊತೆಗೆ ಮತ್ತೊಬ್ಬ ಬಿಜೆಪಿ ಅಭ್ಯರ್ಥಿ ಡಾ.ಹಲನೂರು ಲೇಪಾಕ್ಷಿ ಕೂಡ ಸ್ವತಂತ್ರ್ಯವಾಗಿ ಸ್ಪರ್ಧಿಸಿದ್ದಾರೆ.

ಈ ಇಬ್ಬರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸದಂತೆ ತಡೆಯಲು ಬಿಜೆಪಿ ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ, ಚಿದಾನಂದ ಪರವಾಗಿ ಪಕ್ಷದ ಘಟಾನುಘಟಿಗಳು ಪ್ರಚಾರ ನಡೆಸುತ್ತಿದ್ದಾರೆ.

ತನ್ನ ಪತಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಮುಜುಗರ ತಂದಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ. ಆದರೆ ತಮ್ಮ ಪತಿಗೆ ಬೆಂಬಲ ನೀಡುತ್ತಾರೋ ಇಲ್ಲವೋ ಎಂಬುದನ್ನು ಅವರು ಸ್ಪಷ್ಟ ಪಡಿಸಿಲ್ಲ.

ಚುನಾವಣೆಯಲ್ಲಿ ತಾವು ಗೆಲ್ಲುವುದಾಗಿ ಲೇಪಾಕ್ಷಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಅನುಕಂಪ ತಮ್ಮ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಇದುವರೆಗೂ ಮೂರು ಬಾರಿ ಲೇಪಾಕ್ಷಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಇನ್ನೂ ವಿಧಾನಸಭೆ, ಸಂಸತ್ ಮತ್ತು ಎಂಎಲ್ ಸಿ ಚುನಾವಣೆಯಲ್ಲಿ ಬಿಜೆಯನ್ನು ಟೀಕಿಸಿದ್ದ ಚಿದಾನಂದ ಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಮತದಾರರಿಗೆ ಅವರು ಯಾರು ಎಂಬುದು ತಿಳಿದಿಲ್ಲ, ಕಳೆದ 30 ವರ್ಷಗಳಿಂದ ನಾನು ಪದವೀಧರಿಗಾಗಿ ಕೆಲಸ ಮಾಡುತ್ತಿದ್ದೇನೆ, ಜೊತೆಗೆ ಶಿಕ್ಷಕರ ಪರವಾಗಿ ಹಲವು ಉತ್ತಮ ಕೆಲಸ ಮಾಡಿದ್ದೇನೆ,ನಾನು ಲಿಂಗಾಯತ ಸಮುದಾಯದ ಪ್ರಬಲ ಅಭ್ಯರ್ಥಿ ಎಂದು ಲೇಪಾಕ್ಷಿ ತಿಳಿಸಿದ್ದಾರೆ.

ಬಿಜೆಪಿಗೆ ಇಬ್ಬರು ಬಂಡಾಯ ಅಭ್ಯರ್ಥಿಗಳು ತಲೆನೋವಾಗಿದ್ದಾರೆ, ಆದರೆ ವಿದ್ಯಾವಂತರ ಮನಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ, ಅವರೆಲ್ಲಾ ಸೂಕ್ಷ್ಮ ಮನಸ್ಸಿನವರು ಎಂದು ಕ್ಷೇತ್ರದ ಉಸ್ತುವಾರಿ ಕೆಎಸ್ ನವೀನ್ ತಿಳಿಸಿದ್ದಾರೆ. ಪಕ್ಷದ ಮುಖಂಡರು ಚಿದಾನಂದ ಪರವಾಗಿ ಪ್ರಚಾರಮಾಡುವುದರಿಂದ ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.


SHARE THIS

Author:

0 التعليقات: