ಸಿದ್ದರಾಮಯ್ಯರ ಸರ್ಕಾರದಲ್ಲಿ 1 ಲಕ್ಷ ಹುದ್ದೆಗಳ ಭರ್ತಿ
ಹುಬ್ಬಳ್ಳಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆದ ಸುಧಾರಣೆಗಳಿಂದಾಗಿ 1 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳಿಗೆ ನೇಮಕಾತಿಗಳು ನಡೆದವು. ಇದು ಕಾಂಗ್ರೆಸ್ನ ಹೆಮ್ಮೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿನ ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ನೆಹರೂ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಸಭಾಂಗಣದಲ್ಲಿ ಶನಿವಾರ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಆರ್. ಕುಬೇರಪ್ಪ ಪರ ಮತಯಾಚಿಸಿ ಮಾತನಾಡಿದರು.
'ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 7,905 ಪ್ರಾಥಮಿಕ, 1,689 ಪ್ರೌಢಶಾಲಾ ಶಿಕ್ಷಕರ ನೇಮಕಾತಿ, 10 ಸಾವಿರ ಪದವೀಧರ ವಿಷಯವಾರು ಶಿಕ್ಷಕರು ಹಾಗೂ ಗ್ರಂಥಪಾಲಕರ ನೇಮಕಾತಿ ನಡೆದಿದೆ. ನೇಮಕಾತಿ ಮಾತ್ರವಲ್ಲದೇ ವೇತನ ಹೆಚ್ಚಳ ವಿಚಾರದಲ್ಲೂ ನಮ್ಮ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿತ್ತು. ಆದ್ದರಿಂದ ಈ ಸಲದ ಚುನಾವಣೆಯಲ್ಲಿ ಕುಬೇರಪ್ಪ ಅವರನ್ನು ಬೆಂಬಲಿಸಬೇಕು' ಎಂದು ಕೋರಿದರು.
ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಯೂಸೂಫ್ ಸವಣೂರು ಮಾತನಾಡಿ, 'ಚುನಾವಣೆ ಸಂದರ್ಭದಲ್ಲಿ ಕೇವಲ ಭರವಸೆ ನೀಡಿ ಮರಳು ಮಾಡುವ ಪಕ್ಷಗಳನ್ನು ತಿರಸ್ಕರಿಸಿ, ನಿಜವಾಗಿಯೂ ಪದವೀಧರರ ಸಂಕಷ್ಟಗಳಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು' ಎಂದು ಮನವಿ ಮಾಡಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರು, ಪದಾಧಿಕಾರಿಗಳಾದ ಬಶೀರ್ ಹಳ್ಳೂರು, ಅಬ್ದುಲ್ ಮುನಾಫ್ ದೇವಗಿರಿ, ಮಹ್ಮದ್ ಖಾನ್ ಪಠಾಣ್, ಹಜ್ಜುಖಾನ್ ಧಾರವಾಡ, ಮೆಹಮೂದ್ ಕೋಳೂರು, ಶಬ್ಬೀರ್ ಚುಹೇ, ಸಲೀಂ ಸುಂಡಕೆ, ಇಮಾಂ ಹುಸೇನ್ ಮಡಕಿ, ಸಂಸ್ಥೆಯ ಪ್ರಾಚಾರ್ಯರಾದ ಡಾ. ಎಸ್.ಎಸ್. ಮೌಲ್ವಿ, ಫಿರೋಜ್, ಶಿವಳ್ಳಿ, ಅನ್ಸಾರಿ ಪಾಲ್ಗೊಂಡಿದ್ದರು.
0 التعليقات: