Saturday, 19 September 2020

ಕುರುಬರನ್ನು ಎಸ್‌ಟಿಗೆ ಸೇರಿಸಿ: ಹಾಲುಮತ ಮಹಾಸಭಾ ಹಕ್ಕೊತ್ತಾಯ

 

ಕುರುಬರನ್ನು ಎಸ್‌ಟಿಗೆ ಸೇರಿಸಿ: ಹಾಲುಮತ ಮಹಾಸಭಾ ಹಕ್ಕೊತ್ತಾಯ

ಮೈಸೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಹಾಲುಮತ ಮಹಾಸಭಾದ ಕಾನೂನು ಸಲಹೆಗಾರ ರಾಮಕೃಷ್ಣ ಶನಿವಾರ ಇಲ್ಲಿ ಒತ್ತಾಯಿಸಿದರು.

ಪ್ರಸ್ತುತ ಕುರುಬ ಸಮುದಾಯ ಪ್ರವರ್ಗ 2 ಎ ನಲ್ಲಿ ಬರುತ್ತಿದೆ. ಇಲ್ಲಿ 108 ಜಾತಿಗಳಿವೆ. ರಾಜ್ಯದಲ್ಲಿ ಮೂರನೇ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿಯಾದರೂ; ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದೆ. ಆದ್ದರಿಂದ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಪರಿಶಿಷ್ಟ ಪಂಗಡಕ್ಕೆ ಶೇ 3ರ ಮೀಸಲಾತಿಯಿದೆ. ಈ ಮೀಸಲಾತಿಯನ್ನು ಶೇ 9ಕ್ಕೆ ಹೆಚ್ಚಿಸಬೇಕು ಎಂದು ಇದೇ ಸಂದರ್ಭ ತಮ್ಮ ಹಕ್ಕೊತ್ತಾಯ ಮಂಡಿಸಿದರು.

ಜಾತಿ ಜನಗಣತಿ ವರದಿ ಮಂಡಿಸಿ: 'ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಲಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆಸಿದ ಜಾತಿ ಜನಗಣತಿ ವರದಿಯನ್ನು ಈ ಅಧಿವೇಶನದಲ್ಲೇ ಸರ್ಕಾರ ಮಂಡಿಸಲಿ' ಎಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಒತ್ತಾಯಿಸಿದರು.

'ಜನಸಂಖ್ಯೆ ಆಧಾರಿತ, ಆರ್ಥಿಕ, ಶೈಕ್ಷಣಿಕ ಪ್ರಗತಿ ಆಧಾರಿತ ವೈಜ್ಞಾನಿಕ ಮೀಸಲಾತಿ ಜಾರಿಗೊಳಿಸಲಿ ಎಂಬುದೇ ನಮ್ಮ ಬೇಡಿಕೆಯಾಗಿದೆ' ಎಂದು ತಿಳಿಸಿದರು.

ಮೈಸೂರು ಹಾಲುಮತ ಮಹಾಸಭಾದ ಸಮೃದ್ಧಿ ಸುರೇಶ್, ಡಾ.ಭರತ್, ಪುರುಷೋತ್ತಮ್, ಸಂಘಟನಾ ಕಾರ್ಯದರ್ಶಿ ಈಶ್ವರ್ ಪತ್ರಿಕಾಗೋಷ್ಠಿಯಲ್ಲಿದ್ದರು.


SHARE THIS

Author:

0 التعليقات: