ವಿರೋಧಿಗಳಲ್ಲಿಯೂ ಆಶ್ಚರ್ಯವನ್ನುಂಟು ಮಾಡುವ ಸಾರ್ವಜನಿಕ ನಡುವಳಿಕೆಯನ್ನು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇತ್ತೀಚೆಗೆ ತೋರಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಮೇಲೆ ಹರಿಹಾಯುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸಿಎಂ ಯಡಿಯೂರಪ್ಪ ಅವರ ಮೇಲೆ ಮೃದು ಧೋರಣೆ ತೋರಿಸುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡ ಸಿದ್ದರಾಮಯ್ಯ ಅವರನ್ನು ಆತ್ಮೀಯ ಸ್ನೇಹಿತನಂತೆ ಕಾಣುತ್ತಿದ್ದಾರೆ. ಇದಕ್ಕೆ ಕೊಡಬಹುದಾದ ಇತ್ತೀಚಿಗಿನ ಮತ್ತೊಂದು ಉದಾಹರಣೆ ಎಂದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿನಂದನಾ ಸಮಾರಂಭ.
ಅದಕ್ಕೂ ಮೊದಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭೇಟಿಮಾಡಿ ಆರೋಗ್ಯ ವಿಚಾರಿಸಿದ್ದು. ಮೇಲ್ನೋಟಕ್ಕೆ ಇವೆಲ್ಲ ಮಾನವೀಯತೆಯ ನಡೆಗಳು ಎಂಬಂತೆ ಕಂಡುಬಂದರೂ, ರಾಜಕೀಯ ಲೆಕ್ಕಾಚಾರವನ್ನು ಇಲ್ಲಿ ತಳ್ಳಿಹಾಕುವಂತಿಲ್ಲ.
ಯಡಿಯೂರಪ್ಪ ಅವರ ಬಳಿಕ ಬಿಜೆಪಿಯಲ್ಲಿ ಹೇಳಿಕೊಳ್ಳುವಂತಹ ಸಮುದಾಯದ ನಾಯಕರು ಕಾಣುತ್ತಿಲ್ಲ. ಇನ್ನು ಬಿಜೆಪಿ ಹೈಕಮಾಂಡ್ ಕೆಲವರನ್ನು ಯಡಿಯೂರಪ್ಪ ಅವರ ಉತ್ತರಾಧಿಕಾರಿ ಎಂಬಂತೆ ಬೆಳೆಸಲು ಪ್ರಯತ್ನ ಪಡುತ್ತಿದೆ. ಆದರೂ ಸಿಎಂ ಯಡಿಯೂರಪ್ಪ ಅವರಂತಹ ಮತ್ತೊಬ್ಬ ನಾಯಕ ಹೈಕಮಾಂಡ್ ನೆರಳಿನಿಂದ ಬೆಳೆದು ಬರುವುದು ಅಸಾಧ್ಯ. ಅಲ್ಲಿಯೆ ಅಡಗಿದೆ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ರಾಜಕೀಯ ಜಾಣ್ಮೆ!